ಹೈಕೋರ್ಟ್ ಆದೇಶದ ಹಿನ್ನೆಲೆ; ಕಟ್ಟೆಮಾಡು ಗ್ರಾಮದಲ್ಲಿ ಅಧಿಕಾರಿಗಳಿಂದ ಸಭೆ
ಮಡಿಕೇರಿ : ತಾಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ಮಾದೇಶ್ವರ ದೇವಾಲಯದ ವಸ್ತ್ರ ಸಂಹಿತೆ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಪ್ರವೀಣ್ ಅವರ ಸಮ್ಮುಖದಲ್ಲಿ ಗ್ರಾಪಂ ಪ್ರತಿನಿಧಿಗಳು, ಗ್ರಾಮದ ಪ್ರಮುಖರು ಹಾಗೂ ದೇವಾಲಯ ಆಡಳಿತ ಮಂಡಳಿಯ ಪದಾಧಿಕಾರಿಗಳ ಸಭೆ ನಡೆಯಿತು.
ಕಟ್ಟೆಮಾಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಹೈಕೋರ್ಟ್ ಮಧ್ಯಂತರ ಆದೇಶವನ್ನು ಪಾಲಿಸುವಂತೆ ಮತ್ತು ಶಾಂತಿಯನ್ನು ಕಾಪಾಡುವಂತೆ ಅಧಿಕಾರಿಗಳು ಸೂಚನೆ ನೀಡಿದರು.
ದೇವಾಲಯದ 200 ಮೀ. ವ್ಯಾಪ್ತಿಯಲ್ಲಿ ಮಾ.13ರವರೆಗೆ 163 ಸೆಕ್ಷನ್ ಪ್ರಕಾರ ನಿಷೇಧಾಜ್ಞೆ ಜಾರಿ ಇರುವುದರಿಂದ ದೇವಾಲಯಕ್ಕೆ 5 ಮಂದಿಗಿಂತ ಹೆಚ್ಚಿನ ಜನರು ತೆರಳುವಂತಿಲ್ಲ. ಯಾವುದೇ ಕಾರಣಕ್ಕೂ ಶಾಂತಿ ಸುವ್ಯವಸ್ಥೆಗೆ ಗ್ರಾಮಸ್ಥರಿಂದ ಸಮಸ್ಯೆಯಾಗದಂತೆ ಸೌಹಾರ್ದ ಕಾಪಾಡಿಕೊಳ್ಳಬೇಕೆಂದು ತಹಶೀಲ್ದಾರ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮನವಿ ಮಾಡಿದರು.
ಸಭೆಯಲ್ಲಿ ದೇವಾಲಯ ಸಮಿತಿಯ ಕೆಲವು ಪದಾಧಿಕಾರಿಗಳು, ಮರಗೋಡು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಪಿಡಿಒ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ವೈಯುಕ್ತಿಕ ಕಾರಣಕ್ಕಾಗಿ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಶಶಿ ಜನಾರ್ಧನ ಅವರು ಮೊದಲೇ ಮಾಹಿತಿ ನೀಡಿ ಸಭೆಗೆ ಗೈರು ಹಾಜರಾಗಿದ್ದರು. ಇವರೊಂದಿಗೆ ಕೆಲವು ಪದಾಧಿಕಾರಿಗಳೂ ಸಭೆಯಲ್ಲಿ ಹಾಜರಿರಲಿಲ್ಲ.