×
Ad

ಮಡಿಕೇರಿ: 25ನೇ ದಿನಕ್ಕೆ ಕಾಲಿರಿಸಿದ ನಿವೇಶನ ರಹಿತರ ಅಹೋರಾತ್ರಿ ಧರಣಿ

Update: 2025-05-20 19:19 IST

ಮಡಿಕೇರಿ: ಅಮ್ಮತ್ತಿ ಮತ್ತು ಕಾರ್ಮಾಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪರಿಶಿಷ್ಟರು, ಬಡವರು, ಹಿಂದುಳಿದವರು ಹಾಗೂ ಕಾರ್ಮಿಕರು ನಿವೇಶನದ ಬೇಡಿಕೆಯನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 25ನೇ ದಿನಕ್ಕೆ ಕಾಲಿಟ್ಟಿದೆ.

ಅಮ್ಮತ್ತಿ ನಾಡ ಕಚೇರಿ ಬಳಿ ಧರಣಿ ನಡೆಸುತ್ತಿರುವವರನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂಎಲ್ ಪಕ್ಷದ ರಾಜ್ಯ ಸಂಯೋಜಕ ಡಿ.ಎಸ್.ನಿರ್ವಾಣಪ್ಪ ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ, ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರ ಬದುಕು ಶೋಚನೀಯವಾಗಿದೆ. ಆಡಳಿತ ವ್ಯವಸ್ಥೆ ಭೂ ಮಾಲೀಕರ ಪರವಾಗಿ ಭೂ ಸುಧಾರಣೆಗಳನ್ನು ಮಾಡುತ್ತಿದ್ದಾರೆ. ಬಡವರ ಪರವಾದ ಜವಾಬ್ದಾರಿಗಳನ್ನು ಮರೆತ್ತಿದ್ದಾರೆ. ಬಡವರು ಬೀದಿ ಪಾಲಾಗಲು ಮತ್ತು ಬಡವರಾಗಿಯೇ ಉಳಿಯಲು ಅಧಿಕಾರಿಗಳೇ ನೇರ ಕಾರಣವೆಂದು ಆರೋಪಿಸಿದರು.

ಬಡವರಿಗೆ ಹಾಗೂ ಶ್ರಮಿಕ ವರ್ಗಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ಬಡವರ ಧರಣಿ ಸತ್ಯಾಗ್ರಹವನ್ನು ನಿರ್ಲಕ್ಷಿಸದೆ ನಿವೇಶನ ಹಂಚಿಕೆಗೆ ಮುಂದಾಗಬೇಕು, ತಪ್ಪಿದಲ್ಲಿ ಜಿಲ್ಲೆಯಾದ್ಯಂತ ಬೃಹತ್ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.

ಸಿಪಿಐಎಂಎಲ್ ನ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಯಾವುದೇ ಸರ್ಕಾರಗಳು ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ, ಹೋರಾಟಗಳ ಮೂಲಕವೇ ಹಕ್ಕುಗಳನ್ನು ಪಡೆಯಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ ಮಾತನಾಡಿ ನಿವೇಶನ ರಹಿತ ಬಡ ಕೂಲಿ ಕಾರ್ಮಿಕರ ಸ್ಥಿತಿಗತಿ ತೀರಾ ಶೋಚನೀಯವಾಗಿದೆ. ನಿವೇಶನ ರಹಿತರ ಹೋರಾಟಗಳಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ, ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಮುಂದಿನ ದಿನಗಳಲ್ಲಿ ನಾಡಕಛೇರಿಗೆ ಬೀಗ ಜಡಿದು ಉಪವಾಸ ಸತ್ಯಾಗ್ರಹ ನಡೆಸಲಾಗುವುದು, ಅಲ್ಲದೆ ಶಾಸಕರ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಸರ್ಕಾರ ನಿವೇಶನ ರಹಿತ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಬಡವರಿಗೆ ಸಾಂವಿಧಾನಿಕ ಹಕ್ಕುಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಅಮ್ಮತ್ತಿ ಹೋರಾಟ ಸಮಿತಿಯ ಅಧ್ಯಕ ಪಾಪಣ್ಣ, ಕಾರ್ಯದರ್ಶಿ ಹೊನ್ನಪ್ಪ, ಉಸ್ತುವಾರಿ ಮಾದೇಶ್, ಕಾರ್ಮಿಕ ಸಂಘದ ಜಿಲ್ಲಾ ಪದಾಧಿಕಾರಿ ಕಿರಣ್ ಜಗದೀಶ್, ಸಾಮಾಜಿಕ ಹೋರಾಟಗಾರ ಎಂ.ರಂಜಿತ್ ಮೌರ್ಯ, ಪೆಗ್ಗೊಲಿ ಹೋರಾಟ ಸಮಿತಿಯ ಸದಸ್ಯರಾದ ಕುಮಾರಿ, ಸುಜಾತ, ನಿವೇಶನ ರಹಿತ ಕುಟುಂಬಗಳ ಸದಸ್ಯರು ಹಾಜರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News