×
Ad

ಪೊನ್ನಂಪೇಟೆ | ಹುಲಿ ಚರ್ಮ-ಉಗುರು ಮಾರಾಟ ಜಾಲ: ವ್ಯವಹಾರ ಕುದುರಿಸುವಾಗಲೇ ದಾಳಿ, ಇಬ್ಬರ ಬಂಧನ

Update: 2025-02-19 15:31 IST

ಮಡಿಕೇರಿ : ಹುಲಿ ಉಗುರು ಮಾರಾಟ ಜಾಲವೊಂದನ್ನು ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸುಮಾರು 12 ಹುಲಿ ಉಗುರುಗಳ ಮಾರಾಟಕ್ಕೆ ವ್ಯವಹಾರ ಕುದುರಿಸುತ್ತಿರುವಾಗಲೇ ದಾಳಿ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಲು ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ದಾಳಿ ಸಂದರ್ಭ ಪರಾರಿಯಾಗಿದ್ದಾನೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬಿ-ಶೆಟ್ಟಿಗೇರಿಯ ಪಿ.ಎನ್.ರಾಜಪ್ಪ ಹಾಗೂ ಬೆಂಗಳೂರು ನಗರದ ಬನಶಂಕರಿಯ ಗೀತಾ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. 12 ಹುಲಿ ಉಗುರು ಮತ್ತು ಕೃತ್ಯಕ್ಕೆ ಬಳಸಿದ್ದ ಮಾರುತಿ ವ್ಯಾನ್ ಅನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ಬೀರುಗ ಗ್ರಾಮದ ಸಂಜು ಎಂಬಾತ ಪರಾರಿಯಾಗಿದ್ದಾನೆ.

ಪೊನ್ನಂಪೇಟೆಯ ಟಿ-ಶೆಟ್ಟಿಗೇರಿ-ಬೀರುಗ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಮಾರುತಿ ಓಮಿನಿ ಕಾರಿನ ಬಳಿ ಓರ್ವ ಮಹಿಳೆ ಸೇರಿದಂತೆ ಮೂವರು ವ್ಯವಹರಿಸುತ್ತಿರುವ ಕುರಿತು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಕ್ಕೆ ಬಂದ ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಲಾಯಿತು. ಈ ಸಂದರ್ಭ ಸಂಜು ತಲೆ ಮರೆಸಿಕೊಂಡಿದ್ದಾನೆ. ಕಾರಿನ ಬಳಿ ಇದ್ದ ಆರೋಪಿಗಳಾದ ರಾಜಪ್ಪ ಹಾಗೂ ಗೀತಾಳನ್ನು ವಿಚಾರಣೆಗೊಳಪಡಿಸಿದ ವೇಳೆ ಪರಾರಿಯಾದ ಸಂಜು ಹುಲಿಯ ಉಗುರು ಮತ್ತು ಚರ್ಮವನ್ನು ಮಾರಾಟ ಮಾಡಲು ಬಂದಿರುವುದಾಗಿ ತಿಳಿದು ಬಂದಿದೆ.

12 ಹುಲಿ ಉಗುರನ್ನು ನೀಡಿ ಚರ್ಮ ನೀಡುವಷ್ಟರಲ್ಲಿ ನಡೆದ ದಾಳಿಯಿಂದ ಭಯಗೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂಜು ಮನೆ ಮೇಲೆ ದಾಳಿ ನಡೆಸಿದ ಸಂದರ್ಭ ಕೃತ್ಯಕ್ಕೆ ಬಳಸುತ್ತಿದ್ದ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಶ್ರೀಮಂಗಲ ವನ್ಯಜೀವಿ ವಲಯದ ಅಧಿಕಾರಿಗಳಿಗೆ ಇಬ್ಬರು ಆರೋಪಿಗಳು, ಮೂರು ಮೊಬೈಲ್ ಹಾಗೂ ವಶಪಡಿಸಿಕೊಂಡ ಸ್ವತ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದು ಹುಣಸೂರು ಉಪ ವಿಭಾಗದ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News