×
Ad

ಪೊನ್ನಂಪೇಟೆ | ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಆರೋಪಿಯ ಬಂಧನ

Update: 2025-03-28 23:48 IST

ಮಡಿಕೇರಿ : ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮದಲ್ಲಿ ಪತ್ನಿ ಸೇರಿದಂತೆ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ಗಿರೀಶ್ ನನ್ನು ಮಿಂಚಿನ ಕಾರ್ಯಾಚರಣೆಯ ಮೂಲಕ ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡ ಕೇರಳ ರಾಜ್ಯದ ತಲಪುಳ ಎಂಬ ಪ್ರದೇಶದಲ್ಲಿ ಗಿರೀಶ್ (38) ನನ್ನು ವಶಕ್ಕೆ ಪಡೆದಿದ್ದಾರೆ. ಬೇಗೂರು ಗ್ರಾಮದ ಬಾಳಂಗಾಡು ಎಂಬಲ್ಲಿ ಒಂಟಿ ಗುಡಿಸಿಲಿನಲ್ಲಿ ವಾಸವಿದ್ದ ಕರಿಯ (75), ಗೌರಿ (70), ನಾಗಿ(30) ಹಾಗೂ ನಾಗಿಯ ಪುತ್ರಿ ಕಾವೇರಿ(7)ಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ ಗಿರೀಶ್ ತಲೆ ಮರೆಸಿಕೊಂಡಿರುವ ಆರೋಪದಡಿ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಮೈಸೂರು ದಕ್ಷಿಣ ವಲಯ ಐಪಿಎಸ್ ಡಾ.ಎಂ.ಬಿ.ಬೋರಲಿಂಗಯ್ಯ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಐಪಿಎಸ್, ಅಪರ ಪೊಲೀಸ್ ಅಧೀಕ್ಷಕ ಸುಂದರ್ ರಾಜ್.ಕೆ.ಎಸ್ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಮಹೇಶ್ ಕುಮಾರ್.ಎಸ್, ಗೋಣಿಕೊಪ್ಪ ವೃತ್ತದ ಸಿಪಿಐ ಶಿವರಾಜ್ ಮುಧೋಳ್, ಪೊನ್ನಂಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್.ಜಿ, ಅಪರಾಧ ಪತ್ತೆ ತಜ್ಞರ ತಂಡ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

ಆರೋಪಿ ಗಿರೀಶ್ ನಾಗಿಯ ಮೂರನೇ ಪತಿಯಾಗಿದ್ದು, ಒಂದು ವರ್ಷದಿಂದ ಒಟ್ಟಿಗೆ ವಾಸಿಸುತ್ತಿದ್ದರು. ಎರಡನೇ ಗಂಡನಾದ ಸುಬ್ರಮಣಿಯೊಂದಿಗೆ ನಾಗಿ ಮತ್ತೆ ಸಂಬಂಧ ಹೊಂದಿರುವ ಬಗ್ಗೆ ಸಂಶಯಗೊಂಡು ಮಾ.27ರಂದು ರಾತ್ರಿ ಗಿರೀಶ್ ನಾಲ್ವರನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News