×
Ad

ಕೊಡಗಿನಲ್ಲಿ ಮುಂದುವರಿದ ಗಾಳಿ ಮಳೆ : ಹಲವೆಡೆ ವಿದ್ಯುತ್ ಕಂಬ, ಮರ, ಮನೆ ಬಿದ್ದು ಹಾನಿ

Update: 2025-07-27 20:16 IST

ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಗಾಳಿ ಮಳೆ ಮುಂದುವರೆದಿದ್ದು, ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಮತ್ತು ಮನೆಗಳು ಬಿದ್ದು ಹಾನಿ ಸಂಭವಿಸಿದೆ. ಸಾಲು ಸಾಲು ವಿದ್ಯುತ್ ಕಂಬಗಳು ನೆಲಕಚ್ಚಿರುವುದರಿಂದ ಜಿಲ್ಲೆಯ ಬಹುತೇಕ ಗ್ರಾಮಗಳು ಕಾರ್ಗತ್ತಲಿನಲ್ಲಿವೆ. ಚಳಿ, ಗಾಳಿ, ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ ಒಂದೇ ದಿನದಲ್ಲಿ ದಾಖಲೆಯ 10 ಇಂಚು ಮಳೆಯಾಗಿದ್ದರೆ, ದಕ್ಷಿಣ ಕೊಡಗಿನ ಹುದಿಕೇರಿಯಲ್ಲಿ 8 ಇಂಚು, ಶ್ರೀಮಂಗಲದಲ್ಲಿ 7 ಇಂಚು, ಕಾವೇರಿಯ ಉಗಮ ಸ್ಥಾನ ಮಡಿಕೇರಿ ತಾಲ್ಲೂಕಿನ ತಲಕಾವೇರಿ ಮತ್ತು ಭಾಗಮಂಲದಲ್ಲಿ 6 ಇಂಚು ಮಳೆಯಾಗಿದೆ.

ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಜಲಾಶಯದ ಎದುರು ಇರುವ ಯಡವನಾಡು- ಹಾರಂಗಿ ಸೇತುವೆ ನೀರಿನಿಂದ ಮುಳುಗಡೆಯಾಗಿದ್ದು, ಸೇತುವೆಯ ಎರಡು ಬದಿಯಲ್ಲಿ ಪೊಲೀಸ್ ಬ್ಯಾರಿಕೇಡ್ ನ್ನು ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಅಳವಡಿಸಿದರು. ಸಾರ್ವಜನಿಕರು ಹಾಗೂ ವಾಹನಗಳು ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

ಹಲವೆಡೆ ಹಾನಿ :

ಅಮ್ಮತ್ತಿ ಹೋಬಳಿ ಪುಲಿಯೇರಿ ಗ್ರಾಮದ ಶ್ರೀಜಾ ರಜೀಶ್ ಅವರ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದು ಭಾಗಶಃ ಹಾನಿಯಾಗಿದೆ. ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದು ಜಖಂಗೊಂಡಿದೆ. ನಾಪೊಕ್ಲು ಹೋಬಳಿ ಎಮ್ಮೆಮಾಡು ಗ್ರಾಮದ ಕರೀಂ ಟಿ.ಎ ಅವರ ವಾಸದ ಮನೆಯ ಮುಂಭಾಗದ ಗೋಡೆ ಕುಸಿದು ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಮನೆಯು ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆಯಿದ್ದು, ಬೇರೆಡೆಗೆ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ನಿವಾಸಿಗಳಿಗೆ ಸಲಹೆ ನೀಡಿದ್ದಾರೆ.

ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ನಿವಾಸಿ ಮಹಾದೇವಿ ಅವರ ಮನೆಗೆ ಮಳೆಯಿಂದ ಹಾನಿಯಾಗಿದೆ. ಮನೆಯ ಎರಡು ಬದಿಯ ಪೂರ್ಣ ಗೋಡೆ ಕುಸಿಯುವ ಹಂತದಲ್ಲಿದ್ದು ಕಂಬಗಳನ್ನು ಆಧಾರವಾಗಿ ನೀಡಲಾಗಿದೆ. ಮಹಾದೇವಿ ಹಾಗೂ ಅನಾರೋಗ್ಯ  ಪೀಡಿತ ಪತಿ ಕೆಂಚ ಅವರು ಸಂಕಷ್ಟಕ್ಕೆ ಸಿಲುಕಿದ್ದು, ಇಬ್ಬರನ್ನು ಸಂಬಂಧಿಯ ಮನೆಗೆ ಸ್ಥಳಾಂತರಿಸಲಾಗಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಹರದೂರು ಗ್ರಾ.ಪಂ ಕಟ್ಟಡ ಹಾಗೂ ಪಕ್ಕದಲ್ಲೇ ಇರುವ ಅಂಗನವಾಡಿ ಕೇಂದ್ರದ ಶೌಚಾಲಯದ ಮೇಲೆ ಮರ ಬಿದ್ದು ಹಾನಿಯಾಗಿದೆ. ಶನಿವಾರಸಂತೆ ಹೋಬಳಿಯ ಎಂ.ಎನ್.ದಿವಾಕರ ಎಂಬುವವರ ಮನೆಗೆ ಹಾನಿಯಾಗಿದೆ. ಮನೆ ಸಂಪೂರ್ಣ ನೆಲಸಮಗೊಳ್ಳುವ ಸಾಧ್ಯತೆಗಳಿರುವುದರಿಂದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಸುಂಟಿಕೊಪ್ಪ ಹೋಬಳಿಯ ಉಲುಗುಲಿ ಗ್ರಾಮದ ಎನ್.ಆರ್.ನಂಜಪ್ಪ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಸಂಪಾಜೆ ಗ್ರಾಮದ ಎ.ಬಿ.ಬೋಜಪ್ಪ ಅವರ ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿಯಾಗಿದೆ.

ಸೋಮವಾರಪೇಟೆ ಹೋಬಳಿಯ ಮಾದಾಪುರದ ಶ್ರೀಮತಿ ಡಿ.ಚೆನ್ನಪ್ಪ ಪದವಿ ಪೂರ್ವ ಕಾಲೇಜು ಕಟ್ಟಡದ ಮೇಲೆ ಮರ ಬಿದ್ದು ಹಾನಿಯಾಗಿದೆ. ಸೂರ್ಲಬ್ಬಿ ಶಾಲೆಯ ಸಭಾಂಗಣದ ಮೇಲ್ಚಾವಣಿಯ ಶೀಟ್ ಗಳು ಭಾರೀ ಗಾಳಿಗೆ ಹಾರಿ ಹೋಗಿದೆ. ಮಡಿಕೇರಿಯ ಕರ್ಣಂಗೇರಿ ಗ್ರಾಮದ ರಜಾಕ್ ಎಂಬುವವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಕುಂಜಿಲ ಗ್ರಾಮದ ಉಮ್ಮರ್ ಎಂಬುವವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಕುಶಾಲನಗರದ ನೆಲ್ಲಿಹುದಿಕೇರಿ ಗ್ರಾಮದ ಸತ್ಯವತಿ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ.

ಸ್ಥಳಾಂತರಕ್ಕೆ ಸೂಚನೆ

ಭಾರೀ ಮಳೆಯಿಂದ ಸೋಮವಾರಪೇಟೆ ಹೋಬಳಿಯ ಬಿಳಿಗೇರಿ ಗ್ರಾಮದ ಹೊಳೆಯ ನೀರು ಏರಿಕೆಯಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಸುರಕ್ಷಿತ ಪ್ರದೇಶಕ್ಕೆ ಅಥವಾ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಸಹಕರಿಸಲು ಮನವಿ

ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಗಾಳಿ ಮಳೆಯಾಗುತ್ತಿದ್ದು, ವಿದ್ಯುತ್ ಕಂಬಕ್ಕೆ ಮರ ಹಾಗೂ ರೆಂಬೆ ಕೊಂಬೆಗಳು ಮುರಿದು ಬಿದ್ದು ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದೆ. ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯವು ಸೆಸ್ಕ್ ವತಿಯಿಂದ ಸಮಾರೋಪಾದಿಯಲ್ಲಿ ನಡೆಯುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News