ಸಿದ್ದಾಪುರ | ದೇವಾಲಯ ಸಮಿತಿ ನಿರ್ದೇಶಕರ ಮೇಲೆ ಹಲ್ಲೆ ಆರೋಪ; ಬಜರಂಗದಳ ಕೊಡಗು ಜಿಲ್ಲಾ ಸಂಯೋಜಕ ಸೇರಿ ಮೂವರ ಬಂಧನ
ಸಾಂದರ್ಭಿಕ ಚಿತ್ರ
ಸಿದ್ದಾಪುರ: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಸಿದ್ದಾಪುರದ ಶ್ರೀ ಮುತ್ತಪ್ಪ ದೇವಾಲಯ ಸಮಿತಿ ನಿರ್ದೇಶಕ ಆರ್.ಸುಬ್ರಮಣಿ ಎಂಬವರ ಮೇಲೆ ಹಲ್ಲೆ ಮಾಡಿರುವ ಆರೋಪದಲ್ಲಿ ಬಜರಂಗದಳದ ಕೊಡಗು ಜಿಲ್ಲಾ ಸಂಯೋಜಕ ಪ್ರವೀಣ್ ಸೇರಿದಂತೆ ಮೂವರನ್ನು ಸಿದ್ದಾಪುರ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಘಟನೆ ಹಿನ್ನೆಲೆ: ಜ.21ರಂದು ಎರಡು ಗುಂಪುಗಳ ನಡುವೆ ಕಲಹ ನಡೆಯುತ್ತಿದ್ದಾಗ ಬಿಡಿಸಲು ಹೋದ ನನ್ನ ಮೇಲೆ ಪ್ರವೀಣ್ ಜೊತೆಗಿದ್ದ ಓರ್ವ ಕತ್ತಿಯಿಂದ ಕುತ್ತಿಗೆಗೆ ಕಡಿಯಲು ಮುಂದಾದಾಗ ತಪ್ಪಿಸಲು ಯತ್ನಿಸಿದ್ದು, ಈ ಸಂದರ್ಭ ತಲೆಗೆ ಗಂಭೀರವಾದ ಗಾಯವಾಗಿರುತ್ತದೆ.
ಇದೇ ವೇಳೆ ಪ್ರವೀಣ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ಇರಿಯಲು ಮುಂದಾದಾಗ ನಾನು ತಡೆದಿದ್ದು, ದೇವಾಲಯ ಸಮಿತಿಯ ನಿರ್ದೇಶಕ ಅನಿಲ್ ಕುಮಾರ್ ಕೈಗೆ ಪ್ರವೀಣ್ ಸೌಟಿನಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ಆರ್. ಸುಬ್ರಮಣಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಗಳ ವಿರುದ್ಧ ಬಿ.ಎನ್.ಎಸ್ 2023, 118(1), 352, 109, 190 ಪ್ರಕಾರ ಪ್ರಕರಣ ದಾಖಲಿಸಿದ ಸಿದ್ದಾಪುರ ಪೊಲೀಸರು, ಪ್ರವೀಣ್ ಹಾಗೂ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರತಿ ದೂರು: ಪ್ರವೀಣ್ ಅವರು ಸಿದ್ದಾಪುರ ಠಾಣೆಗೆ ಹಾಜರಾಗಿ ಸುಬ್ರಮಣಿ ಹಾಗೂ ಅನಿಲ್ ಎಂಬವರು ನನ್ನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿ ದೂರು ದಾಖಲಿಸಿದ್ದಾರೆ.