ಪಣಿ ಎರವರ ಸಮುದಾಯದ ಕಾರ್ಮಿಕನ ಹತ್ಯೆ ಪ್ರಕರಣ | ವೀರಾಜಪೇಟೆಯಲ್ಲಿ ಆದಿವಾಸಿ ಸಂಘರ್ಷ ಮೋರ್ಚಾದಿಂದ ಧರಣಿ
ವೀರಾಜಪೇಟೆ : ಇತ್ತೀಚೆಗೆ ವೀರಾಜಪೇಟೆಯ ಚೆಂಬೆಬೆಳ್ಳೂರಿನಲ್ಲಿ ಮೇಲ್ವರ್ಗದ ವ್ಯಕ್ತಿಯೊಬ್ಬರಿಂದ ಹತ್ಯೆಗೀಡಾದ ಪೊನ್ನಣ್ಣ ಎಂಬ ಪಣಿ ಎರವರ ಸಮುದಾಯದ ಕಾರ್ಮಿಕ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಆದಿವಾಸಿ ಸಂಘರ್ಷ ಮೋರ್ಚಾ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಬುಧವಾರ ಧರಣಿ ನಡೆಸಲಾಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಪುಳ್ಳಂಗಡ ಅಪ್ಪಣ್ಣ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ವಿವಿಧ ಸರಕಾರಗಳು ನಮ್ಮನ್ನು ಆಳಿದರೂ ದಲಿತ ಕಾರ್ಮಿಕ ವರ್ಗದ ಸ್ಥಿತಿ ಹಿಂದೆಂದಿಗಿಂತಲೂ ಶೋಚನೀಯವಾಗಿದೆ ಎಂದರು.
ದಲಿತ-ಆದಿವಾಸಿ ಕಾರ್ಮಿಕರಿಗೆ ಸಂವಿಧಾನ ಬದ್ಧ ಸುರಕ್ಷತೆ ಒದಗಿಸಬೇಕು. ಪೊನ್ನಣ್ಣ ಹತ್ಯೆ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಬೇಕು. ಪೊನ್ನಣ್ಣನವರ ಪತ್ನಿಗೆ ಸರಕಾರಿ ನೌಕರಿ ಒದಗಿಸಬೇಕು. ರಾಜ್ಯ ಸರಕಾರವು ಲೈನ್ ಹೌಸಿಂಗ್ ಪದ್ಧತಿಯನ್ನು ನಿಷೇಧಿಸಬೇಕು. ಆದಿವಾಸಿ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸರಕಾರಿ ಉದ್ಯೋಗದಲ್ಲಿ ಅವಕಾಶಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಇದೇ ವೇಳೆ ಆದಿವಾಸಿ ಸಂಘರ್ಷ ಮೋರ್ಚಾ ಕಾರ್ಯಕರ್ತರು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಗೌರಿ, ಸಹ ಕಾರ್ಯದರ್ಶಿ ಬೊಳಕ ಹಾಜರಿದ್ದರು. ತಹಶೀಲ್ದಾರ್ ರಾಮಚಂದ್ರರವರು ಮನವಿ ಪತ್ರವನ್ನು ಸ್ವೀಕರಿಸಿ ತನಿಖೆಯ ಭರವಸೆ ನೀಡಿದರು.