ವಿರಾಜಪೇಟೆ | ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ : ಇಬ್ಬರಿಗೆ ಗಂಭೀರ ಗಾಯ
ವಿರಾಜಪೇಟೆ : ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಇಬ್ಬರ ಮೇಲೆ ಕಾಡಾನೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿರುವ ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಪಂಚಾಯ್ತಿ ವ್ಯಾಪ್ತಿಯ ತೂಬನಕೊಲ್ಲಿ ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟವೊಂದರ ಮೇಲ್ವಿಚಾರಕ ವಾಸುದೇವಯ್ಯ ಹಾಗೂ ಕಾರ್ಮಿಕ ಸಹರ್ ಅಲಿ ಕಾಡಾನೆ ದಾಳಿಯಿಂದ ಗಾಯಗೊಂಡು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ರವಿವಾರ ರಾತ್ರಿ ಕಾಫಿ ಪಲ್ಪಿಂಗ್ ಕೆಲಸ ಮುಗಿಸಿ ಬೈಕ್ ನಲ್ಲಿ ಇಬ್ಬರು ಕಾಫಿ ತೋಟದ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭ ಹಠಾತ್ತನೆ ಅಡ್ಡಲಾಗಿ ಕಾಡಾನೆ ದಾಳಿಗೆ ಮುಂದಾಗಿದೆ. ಕಾಡಾನೆ ದಾಳಿಯಿಂದ ಪಾರಾಗಲು ಬೈಕನ್ನು ಬಿಟ್ಟು ತೋಟದೊಳಗೆ ಓಡಿ ಹೋಗಲು ಯತ್ನಿಸಿದ್ದಾರೆ. ಈ ಸಂದರ್ಭ ಕಾಡಾನೆ ಹಿಂಬಾಲಿಸಿ ಇಬ್ಬರ ಮೇಲೂ ದಾಳಿ ಮಾಡಿದೆ ಎನ್ನಲಾಗಿದೆ.
ವಾಸುದೇವಯ್ಯ ಅವರಿಗೆ ಕಾಲಿಗೆ ಗಂಭೀರ ಗಾಯ ಹಾಗೂ ಕಾರ್ಮಿಕ ಸಹರ್ ಅಲಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಶಿವರಾಂ, ಉಪ ವಲಯ ಅರಣ್ಯ ಅಧಿಕಾರಿ ಸಂಜಿತ್ ಸೋಮಯ್ಯ, ಅರಣ್ಯ ರಕ್ಷಕ ಅರುಣ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.