ಶಾಸಕ ಎಸ್.ಎನ್. ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ; ‌ಬಂಗಾರಪೇಟೆ ಬಂದ್

Update: 2026-08-06 11:50 IST

ಕೋಲಾರ: ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಗುರುವಾರ ಬಂಗಾರಪೇಟೆ ಪಟ್ಟಣದಲ್ಲಿ ದಲಿತ ಸಂಘಟನೆ, ರೈತ ಸಂಘ, ವರ್ತಕರ ಸಂಘ, ಆಟೋ ಚಾಲಕರ ಸಂಘದಿಂದ ಬಂದ್‌ಗೆ ಕರೆ ನೀಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಬಂದ್ ಹಿನ್ನೆಲೆ ಅಂಗಡಿ ಮುಂಗಟ್ಟುಗಳು ಮುಚ್ಚಲಾಗಿದೆ. ಪಟ್ಟಣದಲ್ಲಿ ಆಟೋ ಸಂಚಾರ ಸಹ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬೆಂಗಳೂರು ಮುಂತಾದೆಡೆ ನಿತ್ಯದ ಕೆಲಸಗಳಿಗೆ ಹೋಗುವ ಜನರು ರೈಲಿನಲ್ಲಿ ತೆರಳುತ್ತಿದ್ದಾರೆ. ಬಸ್ ಸಂಚಾರ ಎಂದಿನಂತೆ ಇದ್ದರೂ ಬಂಗಾರಪೇಟೆ ಪಟ್ಟಣ ಜನರಿಲ್ಲದೆ ಖಾಲಿಯಾಗಿದೆ.

ಶಾಸಕರಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಬಂಗಾರಪೇಟೆ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆದು, ಪೊಲೀಸರು ಬೆಂಕಿ ನಂದಿಸಿದ್ದಾರೆ.

ಬಂದ್ ಹಿನ್ನೆಲೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಬಂಗಾರಪೇಟೆ ಬಸ್ ನಿಲ್ದಾಣ ಸಮೀಪದ ಪೆಟ್ರೋಲ್ ಬಂಕ್ ಬಳಿ ರಸ್ತೆ ತಡೆ ಮಾಡಿ ಬಂದ್ ನಡೆಸುತ್ತಿದ್ದ ಸಂಘಟಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

ಅಗತ್ಯ ವಸ್ತುಗಳಾದ ಪೆಟ್ರೋಲ್ ಬಂಕ್ ಬಂದ್ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಮುಖಂಡ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಮಹೇಶ್ ಬಂದ್‌ಗೆ ವಿರೋಧ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News