Kolar | ಸಾರ್ವಜನಿಕರೊಂದಿಗೆ ಮಾತಿನ ಚಕಮಕಿ : ನ್ಯಾಯಾಧೀಶೆ ಗಾಯತ್ರಿ ಬೀದರ್‌ಗೆ ವರ್ಗಾವಣೆ

Update: 2026-08-06 10:39 IST

ಕೋಲಾರ : ಸಾರ್ವಜನಿಕರೊಂದಿಗೆ ರಸ್ತೆಯಲ್ಲಿ ಮಾತಿನ ಚಕಮಕಿ ನಡೆಸಿ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪ ಹಾಗೂ ಹೈಕೋರ್ಟ್‌ನಿಂದ ತೀವ್ರ ತರಾಟೆಗೆ ಗುರಿಯಾಗಿದ್ದ ಕೋಲಾರ ಜಿಲ್ಲೆಯ ಮಾಲೂರು ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಗಾಯತ್ರಿ ಅವರನ್ನು ಆಡಳಿತಾತ್ಮಕವಾಗಿ ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ (ಆಡಳಿತ) ಚಂದ್ರಶೇಖರ ರೆಡ್ಡಿ ಅವರು ಬುಧವಾರ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ನ್ಯಾಯಾಧೀಶೆ ಗಾಯತ್ರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೀದರ್ ಜಿಲ್ಲೆಯ ಹುಮನಾಬಾದ್‌ನ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

ಘಟನೆಯ ಹಿನ್ನೆಲೆ :

ಮಾಲೂರಿನಲ್ಲಿ ಖಾಸಗಿ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನ್ಯಾಯಾಧೀಶೆ ಗಾಯತ್ರಿ ಮತ್ತು ಕೆ.ಎಂ. ವಿನಯ್ ಎಂಬ ಯುವಕನ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ನ್ಯಾಯಾಧೀಶೆ ಅಧಿಕಾರದ ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಘಟನೆಯ ಬಳಿಕ ಪೊಲೀಸರ ಮೇಲೆ ಒತ್ತಡ ಹೇರಿ ಯುವಕ ವಿನಯ್, ಅವರ ತಾಯಿ ವಿ. ಕವಿತಾ ಹಾಗೂ ಅಜ್ಜ ಪಿ. ವೆಂಕಟೇಶ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ಆರೋಪವೂ ವ್ಯಕ್ತವಾಗಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಬಳಿಕ ಪ್ರಕರಣ ರದ್ದತಿ ಕೋರಿ ಸಂತ್ರಸ್ತರು ಹೈಕೋರ್ಟ್ ಮೊರೆ ಹೋಗಿದ್ದರು.

ಹೈಕೋರ್ಟ್ ತೀವ್ರ ತರಾಟೆ :

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ನ್ಯಾಯಾಧೀಶೆಯ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ರೋಡ್ ರೇಜ್‌ಗೆ ಸಂಬಂಧಿಸಿದ ವಿಡಿಯೋ ಗಮನಿಸಿದರೆ, ನ್ಯಾಯಾಂಗ ಅಧಿಕಾರಿಯ ಘನತೆಗೆ ತಕ್ಕ ನಡವಳಿಕೆ ಇದಲ್ಲ. ಕಾರಿನಿಂದ ಇಳಿದು ಸಾರ್ವಜನಿಕರೊಂದಿಗೆ ವಾಗ್ವಾದ ನಡೆಸಿರುವುದು ಸಮಂಜಸವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

ಅಲ್ಲದೆ, ಪ್ರಭಾವಕ್ಕೆ ಒಳಗಾಗಿ ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸಿದ ಪೊಲೀಸರ ಕ್ರಮವನ್ನೂ ನ್ಯಾಯಪೀಠ ಕಟುವಾಗಿ ಟೀಕಿಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಹೈಕೋರ್ಟ್ ಆಡಳಿತಾತ್ಮಕ ಕ್ರಮವಾಗಿ ನ್ಯಾಯಾಧೀಶೆ ಗಾಯತ್ರಿ ಅವರನ್ನು ಬೀದರ್ ಜಿಲ್ಲೆಯ ಹುಮನಾಬಾದ್‌ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಸ್ಪಷ್ಟೀಕರಣ : ಈ ಸುದ್ದಿಯಲ್ಲಿ ಕಣ್ತಪ್ಪಿನಿಂದಾಗಿ ಬೇರೊಬ್ಬರ ಫೋಟೊ ಪ್ರಕಟವಾಗಿತ್ತು. ವಿಷಯ ಗಮನಕ್ಕೆ ಬಂದ ಕೂಡಲೇ ಆ ಫೋಟೊವನ್ನು ಬದಲಾಯಿಸಲಾಗಿದೆ. ತಪ್ಪು ಫೋಟೊ ಪ್ರಕಟವಾಗಿದ್ದಕ್ಕೆ ವಿಷಾದಿಸುತ್ತೇವೆ. - ಸಂಪಾದಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News