ಕೋಲಾರ: ಬಿಸಿಲು, ಮಳೆ, ಚಳಿ ಹಾಗೂ ಗಾಳಿಯನ್ನು ಲೆಕ್ಕಿಸದೆ, ಯಾವುದೇ ಬೆದರಿಕೆಗಳಿಗೂ ಜಗ್ಗದೆ ಹಗಲಿರುಳು ಸಮಾಜ ಮತ್ತು ದೇಶದ ರಕ್ಷಣೆ ಮಾಡುವ ಪೊಲೀಸ್ ಹಾಗೂ ಸಮವಸ್ತ್ರಧಾರಿ ಪಡೆಗಳ ತ್ಯಾಗ-ಬಲಿದಾನದಿಂದಾಗಿ ನಾವೆಲ್ಲರೂ ಇಂದು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿದೆ ಎಂದು ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಅ.21ರಂದು ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ, ಕರ್ತವ್ಯದ ವೇಳೆ ಪ್ರಾಣ ತ್ಯಾಗ ಮಾಡಿದ ವೀರ ಪೊಲೀಸರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ದೇಶದ ಆಂತರಿಕ ಭದ್ರತೆ ಹಾಗೂ ಗಡಿಗಳ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ ಎಂದ ಜಿಲ್ಲಾಧಿಕಾರಿಗಳು, ಅಕ್ಟೋಬರ್ 21ರ ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, 2025–26ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುವಾಗ ದೇಶಾದ್ಯಂತ ಒಟ್ಟು 154 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದು, ಅವರಲ್ಲಿ ಕರ್ನಾಟಕದ ಐವರು ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ದೇಶದ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ವಿವಿಧ ಅರೆಸೇನಾ ಪಡೆಗಳಾದ ಬಿಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ ಸೇರಿದಂತೆ ವಿವಿಧ ಪಡೆಗಳಲ್ಲಿ ಹುತಾತ್ಮರಾದ 154 ವೀರ ಯೋಧರ ಹೆಸರುಗಳನ್ನು ವಾಚಿಸಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮೂರು ಸುತ್ತು ಕುಶಾಲತೋಪು ಸಿಡಿಸಿ, ಪೊಲೀಸ್ ಧ್ವಜವನ್ನು ಅರ್ಧಮಟ್ಟಕ್ಕಿಳಿಸಲಾಯಿತು. ‘ಲಾಸ್ಟ್ ಪೋಸ್ಟ್’ ಶೋಕಗೀತೆಯೊಂದಿಗೆ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಳಿಕ ಪೊಲೀಸ್ ಬ್ಯಾಂಡ್ ವತಿಯಿಂದ ‘ಅಬೈಡ್ ವಿತ್ ಮಿ’ ಹಾಗೂ ‘ಸಾರೇ ಜಹಾನ್ ಸೆ ಅಚ್ಚಾ’ ಗೀತೆಗಳನ್ನು ನುಡಿಸುವ ಮೂಲಕ ಭಾವಪೂರ್ಣ ಗೌರವ ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಗದೀಶ್ ಮತ್ತು ಮನೀಷಾ ಸೇರಿದಂತೆ ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ವೀರ ಹುತಾತ್ಮರಿಗೆ ನಮನ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor