ಕೋಲಾರ: ನರಸಾಪುರದ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿ ಉದ್ಯೋಗಿ ಅನುಮಾನಾಸ್ಪದ ಸಾವು
ಆಡಳಿತ ಮಂಡಳಿಯ ನಿರ್ಲಕ್ಷ್ಯ ಆರೋಪ; ನ್ಯಾಯಕ್ಕಾಗಿ ಕಾರ್ಖಾನೆ ಎದುರು ಕಾರ್ಮಿಕರ ಪ್ರತಿಭಟನೆ
ಕೋಲಾರ: ನರಸಾಪುರ ಕೈಗಾರಿಕಾ ಪ್ರದೇಶದ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದ್ದು, ಕಂಪನಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಆರೋಪಿಸಿ ನೂರಾರು ಕಾರ್ಮಿಕರು ಕಂಪನಿಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಮೂಲದ ಶ್ರೀಮಂತಿ (22) ಮೃತ ಯುವತಿ. ಕಳೆದ ಮೂರು ವರ್ಷಗಳಿಂದ ಈ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಇವರು, ನಿನ್ನೆ ಸೆಕೆಂಡ್ ಶಿಫ್ಟ್ ಕರ್ತವ್ಯದಲ್ಲಿದ್ದ ವೇಳೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಮಹಿಳಾ ಉದ್ಯೋಗಿಗೆ ಹೊಟ್ಟೆನೋವು ಕಾಣಿಸಿಕೊಂಡಾಗ ತಕ್ಷಣ ಬಾಹ್ಯ ಆಸ್ಪತ್ರೆಗೆ ದಾಖಲಿಸುವ ಬದಲು, ಕಂಪನಿಯ ಆವರಣದಲ್ಲೇ ಇರುವ ವೈದ್ಯರ ಬಳಿ ಚಿಕಿತ್ಸೆ ನೀಡಲಾಗಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಕಂಪನಿಯಲ್ಲೇ ಪ್ರಥಮ ಚಿಕಿತ್ಸೆ ನೀಡಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಿದ್ದರೆ ಪ್ರಾಣಾಪಾಯ ತಪ್ಪುತ್ತಿತ್ತು ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ನಂತರ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಯುವತಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸಹೋದ್ಯೋಗಿಯ ಸಾವಿನ ಸುದ್ದಿ ತಿಳಿದು ಆಕ್ರೋಶಗೊಂಡ ನೂರಾರು ಕಾರ್ಮಿಕರು, ಶಿಫ್ಟ್ ಮುಗಿಸಿ ಹೊರಡುತ್ತಿದ್ದ ಬಸ್ಗಳನ್ನು ತಡೆದು ಕಂಪನಿ ಎದುರು ಪ್ರತಿಭಟನೆ ನಡೆಸಿದರು. ಮೃತ ಯುವತಿಗೆ ನ್ಯಾಯ ಒದಗಿಸಬೇಕು ಮತ್ತು ಕಂಪನಿಯ ವೈದ್ಯಕೀಯ ನಿರ್ಲಕ್ಷ್ಯದ ಬಗ್ಗೆ ತನಿಖೆಯಾಗಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಈ ಬೃಹತ್ ಕಂಪನಿಯ ಎದುರು ಉಂಟಾದ ಗೊಂದಲದ ಪರಿಸ್ಥಿತಿಯನ್ನು ತಿಳಿಗೊಳಿಸಲು ವೇಮಗಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು ಎಂದು ತಿಳಿದು ಬಂದಿದೆ.