ತೊಗರಿಗೆ 12 ಸಾವಿರ ರೂ. ಬೆಂಬಲ ಬೆಲೆ: ರೈತ ಸಂಘ ಒತ್ತಾಯ
ಕನಕಗಿರಿ : ತೊಗರಿ ಬೆಳೆಗೆ ಕೇಂದ್ರ ಸರ್ಕಾರದ ಎಂ.ಎಸ್.ಪಿ ದರ ಪ್ರತಿ ಕ್ವಿಂಟಲ್‌ಗೆ ರೂ. 8000 ಜೊತೆಗೆ ರಾಜ್ಯ ಸರ್ಕಾರದ ಸಹಾಯ ಧನವನ್ನು ಘೋಷಿಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಹೇಳಿದರು.
ಇಲ್ಲಿನ ತಶೀಲ್ದಾರ್ ಕಚೇರಿಯಲ್ಲಿ ತಶೀಲ್ದಾರ್ ವಿಶ್ವಾನಾಥ ಮುರುಡಿ ಮೂಲಕ ಮಾನ್ಯ ಮುಖ್ಯ ಕಾರ್ಯದರ್ಶಿಗಳು ವಿಧಾನಸೌಧ, ಮೂರನೇ ಮಹಡಿ ಬೆಂಗಳೂರು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಜಿಲ್ಲೆಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು ತೊಗರಿ ಬೆಳೆಯನ್ನು ರೈತರು ಬೆಳೆದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ತೊಗರಿ ಬೆಳೆಯಲು ರೈತರು ಒಂದು ಎಕರೆಗೆ ಕನಿಷ್ಠ 15 ರಿಂದ 20 ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ತೊಗರಿ ಬೆಳೆಗೆ ಬೆಂಬಲ ಬೆಲೆ ಕೇವಲ ಪ್ರತಿ ಕ್ವಿಂಟಲ್‌ಗೆ 8000 ರೂಪಾಯಿಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದ್ದು, ಇದರಿಂದ ರೈತರಿಗೆ ಆರ್ಥಿಕ ಹೊರೆಯಾಗಿದೆ ಎಂದರು.
ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರವು ತನ್ನ ಅವರ್ತ ನಿಧಿಯಿಂದ ಕನಿಷ್ಠ ಪ್ರತಿ ಕ್ವಿಂಟಲ್‌ಗೆ 4 ಸಾವಿರ ರೂಪಾಯಿಗಳನ್ನು ಸಹಾಯ ಧನವನ್ನಾಗಿ ಘೋಷಿಸಿ, ಈಗಾಗಲೇ ರೈತರಿಗೆ ಕೇಂದ್ರ ಸರಕಾರ ಘೋಷಿಸಿದ ಎಂ ಎಸ್ ಪಿ ದರ 8000 ಸಾವಿರ ರೂಪಾಯಿಗಳು ಹಾಗೂ ರಾಜ್ಯ ಸರಕಾರದ 4 ಸಾವಿರ ರುಪಾಯಿಗಳು ಸೇರಿ ಒಟ್ಟು 12 ಸಾವಿರ ರೂಪಾಯಿಗಳಿಗೆ ರೈತರು ಬೆಳೆದ ತೊಗರಿಯನ್ನು ಖರೀದಿಸಿ ರೈತರ ಅಕೌಂಟ್‌ಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗಳಿಂದಾಗಿ ಈ ವರ್ಷ ತೊಗರಿ ಬೆಳೆದ ರೈತರಿಗೆ ರಾಜ್ಯ ಸರ್ಕಾರ ಅನ್ಯಾಯ ಎಸಗಿದೆ. ರೈತರ ಸಂಕಷ್ಟವನ್ನು ಅರಿತುಕೊಂಡು ರಾಜ್ಯ ಸರ್ಕಾರವು ತನ್ನ ಪಾಲಾದ ಸಹಾಯಧನವನ್ನು ತ್ವರಿತವಾಗಿ ಘೋಷಿಸಲೇಬೇಕೆಂದು ತಮ್ಮ ಮೂಲಕ ವಿನಂತಿಸಿಕೊಳ್ಳುತ್ತೇವೆ. ಒಂದು ವೇಳೆ ವಾರದೊಳಗೆ ಘೋಷಣೆಯಾಗದಿದ್ದರೆ, ಮಾನ್ಯ ತಹಶೀಲ್ದಾರರ ಕಚೇರಿಯ ಮುಂದೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.
ರೈತರಾದ ಸೋಮನಾಥ ನಾಯಕ, ಶಿವುಕುಮಾರ, ಶೇಖರಪ್ಪ, ಹನುಮಂತ ಇತರರು ಇದ್ದರು.