×
Ad

ಕನಕಗಿರಿ : ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಸ್ಎಫ್‌ಐ ಮನವಿ

Update: 2026-07-16 13:54 IST

ಕನಕಗಿರಿ: ಡಾ. ಬಿ.ಆರ್ ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಜಿಲ್ಲಾ ಸಮಿತಿ ಬುಧವಾರ ಮನವಿ ಸಲ್ಲಿಸಿತು.

ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಿಧಾನಸೌಧ, ಬೆಂಗಳೂರು ಹಾಗೂ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು, ಬೆಂಗಳೂರು ಅವರಿಗೆ ಮನವಿ ಸಲ್ಲಿಸಲಾಯಿತು.

ಎಸ್ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ್ ಈಚನಾಳ ಮಾತನಾಡಿ, ಜು. 12 ರಂದು ರಾತ್ರಿ 12 ಗಂಟೆಗೆ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಗಲಾಟೆ ನಡೆದು ದೈಹಿಕವಾಗಿ ಹಲ್ಲೆ ನಡೆದಿದೆ. ಶಾಲಾ ಸಂಸತ್ ಚುನಾವಣೆಯಲ್ಲಿ ತಮಗೆ ಮತ ನೀಡಲಿಲ್ಲ ಎಂಬ ಕಾರಣಕ್ಕೆ ದೊಡ್ಡ ಮಕ್ಕಳು ಚಿಕ್ಕ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ.

ಹಲ್ಲೆಗೆ ಒಳಗಾದ ಮಕ್ಕಳ ಪಾಲಕರು ಶಾಲೆಗೆ ಬಂದು ವಿಚಾರಿಸಿದಾಗ, ಇದಕ್ಕೆ ಕಾರಣ ಅಲ್ಲಿನ ದೈಹಿಕ ಶಿಕ್ಷಕರು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ದಲಿತ ಸಂಘಟನೆ, ಪಾಲಕರು ಮತ್ತು SFI ಮುಖಂಡರಿಗೆ ಪ್ರಾಂಶುಪಾಲರು ಹಾಗೂ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳು ಮಂಗಳವಾರ ಪಾಲಕರ ಸಭೆ ಮತ್ತು ಸಂಘಟನೆಗಳ ಜಂಟಿ ಸಭೆ ಕರೆದು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು.

ಜಿಲ್ಲಾಧಿಕಾರಿಗಳು ಯಾವುದೇ ಪಾಲಕರ ಸಭೆ ಕರೆಯದೆ ಕೇವಲ ಸಿಬ್ಬಂದಿಗಳ ಸಭೆ ಮಾಡಿದ್ದಾರೆ. ವಿಚಾರಿಸಲು ಹೋದ ವಿದ್ಯಾರ್ಥಿ ಮುಖಂಡರನ್ನು ಒಳಗೆ ಬರಬೇಡಿ ಎಂದು ತಡೆದಿದ್ದಾರೆ ಎಂದು ಆರೋಪಿಸಿದರು.

ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿದ್ದಾರೆ. ಈ ವಿಷಯವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ. ಕೂಡಲೇ ಸಮಾಜ ಕಲ್ಯಾಣ ಜಿಲ್ಲಾಧಿಕಾರಿಗಳು ಹಾಗೂ ವಿಷಯ ಮುಚ್ಚಿ ಹಾಕಲು ಯತ್ನಿಸಿದ ಎಲ್ಲಾ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ಹನುಮೇಶ ಮ್ಯಾಗಡೇ, ಪರಶುರಾಮ್, ನೀಲಕಂಠ ಬಡಿಗೇರ್, ಮೌಲಾ ಹುಸೇನ, ನಿಂಗಪ್ಪ, ಹುಸೇನಪ್ಪ, ಶಿವಪ್ಪ, ವೆಂಕಟೇಶ, ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News