Koppala | ಕೆಆರ್ ಐಡಿಎಲ್ ನಲ್ಲಿ ಅಕ್ರಮ ಪ್ರಕರಣ: ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದ ಚಿಂಚೋಳಿಕರ, ಗುತ್ತಿಗೆದಾರನ ಬಂಧನ
ಕೊಪ್ಪಳ: ನಗರದ ಕೆಆರ್ಐಡಿಎಲ್ ಇಲಾಖೆಯಲ್ಲಿ ನಡೆದಿದ್ದ ಭಾರೀ ಪ್ರಮಾಣದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಹಿಂದಿನ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದ ಝೆ.ಎಂ.ಚಿಂಚೋಳಿಕರ ಎಂಬ ಅಧಿಕಾರಿ ಹಾಗೂ ಗುತ್ತಿಗೆದಾರ ದೇವರಾಜ್ ರೇಷ್ಮೆ ಎಂಬವರನ್ನು ಕೊಪ್ಪಳ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಕೆಆರ್ ಐಡಿಎಲ್ ನಲ್ಲಿ ನೂರಾರು ಕೋಟಿ ರೂ. ವರೆಗೆ ಭ್ರಷ್ಟಾಚಾರ ನಡೆದಿರುವ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಚಿಂಚೋಳಿಕರ ಹಾಗೂ ಗುತ್ತಿಗೆದಾರ ಭಾಗಿಯಾಗಿರುವ ಕುರಿತು ದಾಖಲೆ ಸಮೇತ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು.
ಬೆನ್ನಲ್ಲೇ ಅಂದು ಸರಕಾರದಿಂದ ಚಿಂಚೋಳಿಕರ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಇದೀಗ ಬೆಂಗಳೂರಿನಲ್ಲಿ ಅಧಿಕಾರಿ ಹಾಗೂ ಗುತ್ತಿಗೆದಾರನನ್ನು ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು, ಬುಧವಾರ ಸಂಜೆ ನಗರದಲ್ಲಿ ಕೋರ್ಟ್ ಗೆ ಹಾಜರುಪಡಿಸಿ, ಬಳಿಕ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.