×
Ad

ಕೊಪ್ಪಳ| ಕೃಷಿಗೆ ನಿಗದಿತ ವಿದ್ಯುತ್ ನೀಡುವಂತೆ ಆಗ್ರಹಿಸಿ ರೈತರಿಂದ ಧರಣಿ

Update: 2026-01-14 19:26 IST

ಕುಷ್ಟಗಿ: ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ ಕನಿಷ್ಠ ಏಳು ಗಂಟೆ ವಿದ್ಯುತ್ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಜನದರ್ಶನ ವೇದಿಕೆಯ ರಾಜ್ಯಾಧ್ಯಕ್ಷ ದೇವಪ್ಪ ಮೆಣಸಗಿ ಅವರ ನೇತೃತ್ವದಲ್ಲಿ ರೈತರು ಸಮೀಪದ ಹನಮನಾಳ ಜೆಸ್ಕಾಂ ಕಚೇರಿ ಮುಂದೆ ಧರಣಿ ನಡೆಸಿದರು.

ಹನಮನಾಳ ಹೋಬಳಿ ವ್ಯಾಪ್ತಿಗೆ ಒಳಪಡುವ ವಾರಿಕಲ್, ಯರಗೇರ, ಗೊರೆಬಿಹಾಳ, ಕುಂಬಾಳವತಿ, ನರಸಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 28 ವಿದ್ಯುತ್ ಪರಿವರ್ತಕಗಳಿಗೆ ಸಂಬಂಧಿಸಿದ ರೈತರು ಮತ್ತು ಗ್ರಾಮಸ್ಥರಿಗೆ ನಿಗದಿತ ವೇಳಾಪಟ್ಟಿ ಇಲ್ಲದೆ ಮನಬಂದಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮಧ್ಯರಾತ್ರಿ 2 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ರೈತರು ನಿದ್ರೆಯನ್ನು ತ್ಯಜಿಸಿ ಹೊಲಗಳಲ್ಲಿ ಕಾದು ನೀರಾವರಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಾದರೂ ರಾತ್ರಿಯ ಸಮಯದಲ್ಲಿಯೂ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ. ಆದ್ದರಿಂದ ರಾತ್ರಿ ಬದಲು ಹಗಲು ವೇಳೆಯಲ್ಲಿ ವಿದ್ಯುತ್ ಸರಬರಾಜು ಮಾಡಬೇಕೆಂದು ಅವರು ಒತ್ತಾಯಿಸಿದರು.

ಸರಕಾರದ ಮಾರ್ಗಸೂಚಿಯಂತೆ ಕೃಷಿಗೆ ಏಳು ಗಂಟೆ ವಿದ್ಯುತ್ ನೀಡಲೇಬೇಕು ಎಂದು ಪಟ್ಟು ಹಿಡಿದ ರೈತರು, ಬೇಸಿಗೆ ಆರಂಭಕ್ಕೂ ಮುನ್ನವೇ ಅಕ್ರಮ ಲೋಡ್ ಶೆಡ್ಡಿಂಗ್ ಜಾರಿಯಲ್ಲಿರುವುದು ಆತಂಕಕಾರಿ ಎಂದು ಹೇಳಿದರು. ವಿದ್ಯುತ್ ಯಾವ ಸಮಯದಲ್ಲಿ ಬರುತ್ತದೆ ಎಂಬ ಸ್ಪಷ್ಟತೆ ಇಲ್ಲದ ಕಾರಣ ಜಮೀನಿಗೆ ನೀರು ಪೂರೈಸಲು ತೀವ್ರ ತೊಂದರೆ ಎದುರಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆಯಲು ದೂರವಾಣಿ ಮೂಲಕ ಸಂಪರ್ಕಿಸಿದರೆ ಸಿಬ್ಬಂದಿಯಿಂದ ಸಮರ್ಪಕ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯುತ್ ಪರಿವರ್ತಕ ಬದಲಾವಣೆ ಹಾಗೂ ಮಾರ್ಗ ದುರಸ್ತಿ ಸಂಬಂಧ ಸಕಾಲ ಯೋಜನೆಯಡಿ ನಿಗದಿತ ಅವಧಿ ಇದ್ದರೂ ಜೆಸ್ಕಾಂ ಅದನ್ನು ಪಾಲಿಸುತ್ತಿಲ್ಲ. 72 ಗಂಟೆಗಳೊಳಗೆ ಪರಿವರ್ತಕ ಬದಲಾವಣೆ ಮಾಡಬೇಕೆಂಬ ನಿಯಮವಿದ್ದರೂ ತಿಂಗಳುವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಬೆಳೆಗಳಿಗೆ ನೀರು ಒದಗಿಸಲಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೇವಪ್ಪ ಮೆಣಸಗಿ ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡದಿದ್ದರೆ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಅಶೋಕ ಉಪ್ಪಾರ, ಶರಣಪ್ಪ ಉಪ್ಪಾರ, ಶ್ರೀಕಾಂತ್, ಹನುಮಪ್ಪ ಪೂಜಾರ, ಶೇಖಪ್ಪ ಗುಡಿ, ಹೇಮಂತ್ ನರಿ, ಕನಕಪ್ಪ ಲಕ್ಕಲಕಟ್ಟಿ, ಹನುಮಂತ, ಅಂದಪ್ಪ, ಬಸವರಾಜ, ಈರಪ್ಪ, ಫಕ್ಕೀರಪ್ಪ, ಯಂಕಪ್ಪ, ರಾಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News