ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಬ್ಲ್ಯಾಕ್‌ಮೇಲ್: ಚಲುವಾದಿ ನಾರಾಯಣಸ್ವಾಮಿ ಆರೋಪ
ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣದ ತನಿಖೆಗೆ ಆಗ್ರಹ
ಕನಕಗಿರಿ: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಜನರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದೆ. ಇದು ಬ್ರೋಕರ್ ಸರ್ಕಾರವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಕನಕಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ಗ್ಯಾರಂಟಿ ಯೋಜನೆಗಳನ್ನು ತೆಗೆದುಹಾಕುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಗ್ಯಾರಂಟಿ ಎಂದರೆ ಜನರನ್ನು ಬ್ಲ್ಯಾಕ್‌ಮೇಲ್ ಮಾಡುವುದೇ? ಎಂದು ಪ್ರಶ್ನಿಸಿದರು.
ನೀವು ಈಗಲೇ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ನೀಡುತ್ತಿಲ್ಲ. ಇನ್ನು ತೆಗೆದುಹಾಕುವುದು ಯಾವಾಗ? ಕಳೆದ ಬಾರಿ ಗ್ಯಾರಂಟಿ ಕೊಡುತ್ತಿರಲಿಲ್ಲ. ಅದಕ್ಕೂ ಮೊದಲು ಯಾವ ಸರ್ಕಾರಗಳೂ ಗ್ಯಾರಂಟಿ ನೀಡುತ್ತಿರಲಿಲ್ಲ. ಆಗ ಜನ ಬದುಕಿರಲಿಲ್ಲವೇ? ಜನ ಆರಾಮವಾಗಿಯೇ ಇದ್ದರು. ಈಗ ನಮ್ಮ ದುಡ್ಡನ್ನೇ ಒಂದು ಜೇಬಿನಿಂದ ತೆಗೆದು ಮತ್ತೊಂದು ಜೇಬಿಗೆ ಹಾಕುತ್ತಿದ್ದೀರಿ. ಅದಕ್ಕೆ ದೊಡ್ಡ ಸಾಧನೆ ಮಾಡಿದಂತೆ ಬಿಂಬಿಸಿಕೊಳ್ಳುತ್ತಿದ್ದೀರಾ? ಎಂದು ಟೀಕಿಸಿದರು.
ಈ ಸರ್ಕಾರ ಗಂಡನನ್ನು ಹೆಂಡತಿಯ ಮುಂದೆ ಏಜೆಂಟ್‌ನಂತೆ ಮಾಡುತ್ತಿದೆ. ಹೆಂಡತಿಗೆ ಉಚಿತ ಎಂದು ಹೇಳಿ, ಗಂಡನಿಗೆ ಡಬಲ್ ಹಾಕಿದರೆ ಅದೇನು ದೊಡ್ಡ ಸಾಧನೆಯೇ? ಈ ರೀತಿ ಜನರನ್ನು ಬ್ಲ್ಯಾಕ್‌ಮೇಲ್ ಮಾಡಬಾರದು. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಿ ನೋಡಿ, ನಿಮ್ಮ ಹಣೆಬರಹ ಏನೆಂಬುದು ಗೊತ್ತಾಗುತ್ತದೆ. ಈ ಬಾರಿ ಜನ ನಿಮ್ಮನ್ನು ಮನೆಗೆ ಕಳುಹಿಸುತ್ತಾರೆ ಎಂದು ಹೇಳಿದರು.
ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ :
ವಾಲ್ಮೀಕಿ ನಿಗಮದಲ್ಲಿ 87 ಕೋಟಿ ರೂ. ದುರುಪಯೋಗವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಈ ಕುರಿತು ದಾಖಲೆಗಳಿವೆ. ಈಡಿ ಪ್ರಕರಣ ನಡೆಯುತ್ತಿದೆ. ಸಿಬಿಐ ತನಿಖೆಯೂ ಒಂದು ಕಡೆ ನಡೆಯುತ್ತಿದೆ. ಸಿಐಡಿ ತನಿಖೆ ನಡೆಸಿದೆಯೇ? ಮೊದಲು ಎಸ್‌ಐಟಿ ತನಿಖೆಯಲ್ಲಿ ಕ್ಲೀನ್‌ಚಿಟ್ ಕೊಡಿಸಿದ್ದೀರಿ. ಅಂದರೆ ಈ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಲಗೊಳಿಸುತ್ತಿದೆ. ಅಧಿಕಾರಿಗಳ ಸ್ಥೈರ್ಯವನ್ನು ಕುಗ್ಗಿಸುತ್ತಿದೆ ಎಂದು ಆರೋಪಿಸಿದರು.
ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಅದಕ್ಕೂ ಕಪ್ಪುಚುಕ್ಕೆ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಕ್ಲೀನ್‌ಚಿಟ್ ನೀಡಿರುವುದು ಸಮರ್ಪಕ ತನಿಖೆ ನಡೆದಿಲ್ಲ ಎಂಬುದನ್ನು ತೋರಿಸುತ್ತದೆ. ಅದರ ನಂತರ ನಾವೆಲ್ಲ ಹೋರಾಟ ನಡೆಸಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದೆವು. ರಾಜೀನಾಮೆ ನೀಡಿದ ಬಳಿಕ ಕ್ಲೀನ್‌ಚಿಟ್ ಎಲ್ಲಿಂದ ಬರುತ್ತದೆ? ಮತ್ತೆ ತನಿಖೆ ನಡೆಸಿದ್ದಾರೆಯೇ? ಇನ್ನೂ ಸಿಬಿಐ ಮತ್ತು ಇಡಿ ತನಿಖೆಗಳು ಬಾಕಿ ಇವೆ. ಹೀಗಾಗಿ ಅವರನ್ನು ಮತ್ತೆ ಮಂತ್ರಿ ಮಾಡಬಾರದು. ರಾಜೀನಾಮೆ ನೀಡಿದ ನಂತರ ಕ್ಲೀನ್‌ಚಿಟ್ ನೀಡಿದ್ದು ಹೇಗೆ? ಅದಕ್ಕೆ ಆದೇಶ ನೀಡಿದವರು ಯಾರು? ಎಂದು ಪ್ರಶ್ನಿಸಿದರು.
ಗೃಹ ಸಚಿವರು ಗೃಹ ಇಲಾಖೆಗೆ ಮಾತ್ರ ಸರಿಯಾಗಿದ್ದಾರೆ. ರಾಜ್ಯಕ್ಕೆ ಮತ್ತು ಜನರಿಗೆ ಅವರಿಂದ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಸರ್ಕಾರದ ಈ ಕ್ರಮವನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು.
ತುಂಗಭದ್ರಾ ನೀರಿನ ಸಮಸ್ಯೆ ಬಗೆಹರಿಸಿ :
ತುಂಗಭದ್ರಾ ನೀರಿನ ಸಮಸ್ಯೆ ಇದೆ. ಮಳೆಯ ಕೊರತೆಯಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಇದನ್ನು ಬಗೆಹರಿಸಬೇಕು. ರೈತರ ಬೆಳೆಗಳಿಗೆ ನೀರು ನೀಡದಿದ್ದರೆ ಅದು ಜನವಿರೋಧಿ ಸರ್ಕಾರವಾಗುತ್ತದೆ. ಯಾವುದೇ ಹಂತದಲ್ಲೂ ಇದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.