×
Ad

ಮಳೆಗಾಗಿ ‘ಗುರ್ಜಿ’ ಹೊತ್ತು ಪ್ರಾರ್ಥನೆ; ಕೊಪ್ಪಳ ಜಿಲ್ಲೆ ಬರಪೀಡಿತ ಎಂದು ಘೋಷಿಸಲು ಆಗ್ರಹ

Update: 2026-07-06 18:25 IST

ಯಲಬುರ್ಗಾ: ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಭಟಪನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ‘ಗುರ್ಜಿ’ ಹೊತ್ತು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಆಗ್ರಹಿಸಿದರು.

ಗ್ರಾಮದಲ್ಲಿ ಸಾಮಾನ್ಯವಾಗಿ ಮಹಿಳೆಯರು ನಡೆಸುತ್ತಿದ್ದ ‘ಗುರ್ಜಿ’ ಆಚರಣೆಯನ್ನು ಈ ಬಾರಿ ಪುರುಷರು ಕೈಗೊಂಡರು. ಸಗಣಿಯಿಂದ ತಯಾರಿಸಿದ ‘ಗುರ್ಜಿ’ಯನ್ನು ರೊಟ್ಟಿ ಮಾಡುವ ಹಂಚಿನ ಮೇಲೆ ಇಟ್ಟು ತಲೆಯ ಮೇಲೆ ಹೊತ್ತು ಮನೆ ಮನೆಗೆ ತೆರಳಿ, ಗ್ರಾಮಸ್ಥರು ಅದರ ಮೇಲೆ ನೀರು ಸುರಿದು ಮಳೆಗಾಗಿ ಪ್ರಾರ್ಥಿಸಿದರು.

“ಗುರ್ಜಿ ಗುರ್ಜಿ ಎಲ್ಲ್ಯಾಡಿ ಬಂದೆ, ಹಳ್ಳ-ಕೊಳ್ಳ ತೀರಿಗ್ಯಾಡಿ ಬಂದೆ, ಕಾರ ಮಳೆಯೋ ಕಪ್ಪತ್ತು ಮಳೆಯೋ, ಸುರಿ ಸುರಿ ಸುರಿಯೋ ಮಳೆಯೋ…” ಎಂದು ಹಾಡುತ್ತ ಮಳೆ ಸುರಿಯಲೆಂದು ಬೇಡಿಕೊಂಡರು. ಮನೆಗಳಿಂದ ಸಂಗ್ರಹಿಸಿದ ಧಾನ್ಯಗಳಿಂದ ಸಂಗಟಿ ತಯಾರಿಸಿ ಪ್ರಸಾದವಾಗಿ ವಿತರಿಸುವ ಸಂಪ್ರದಾಯವನ್ನೂ ಆಚರಿಸಲಾಯಿತು.

ಈ ವರ್ಷ ಆರಂಭದಲ್ಲಿ ಸುರಿದ ಮಳೆಯಿಂದ ಉತ್ತೇಜಿತರಾದ ರೈತರು ಹೆಸರು, ಜೋಳ, ಶೇಂಗಾ, ತೊಗರಿ, ಎಳ್ಳು, ಈರುಳ್ಳಿ ಹಾಗೂ ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ಬಳಿಕ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ತೇವಾಂಶದ ಕೊರತೆಯಿಂದ ಬೀಜಗಳು ಮೊಳಕೆಯೊಡೆದು ಒಣಗುತ್ತಿದ್ದು, ದುಬಾರಿ ಬೀಜ ಹಾಗೂ ಗೊಬ್ಬರ ಖರೀದಿಸಿ ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮೋಡ ಕವಿದ ವಾತಾವರಣ ಇದ್ದರೂ ಮಳೆ ಸುರಿಯದ ಕಾರಣ ಬಿಸಿಗಾಳಿ ಹೆಚ್ಚಾಗಿ ಬೆಳೆಗಳು ಬಾಡುತ್ತಿವೆ. ಕೆಲ ರೈತರು ಉಳಿದಿರುವ ಬೆಳೆಗಳನ್ನು ಹರಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಾದ್ಯಂತ ಬರದ ಛಾಯೆ ಆವರಿಸಿರುವುದರಿಂದ ಸರ್ಕಾರ ತಕ್ಷಣವೇ ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಶರಣಬಸಪ್ಪ ದಾನಕೈ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News