×
Ad

Kanakagiri | ಆಸ್ತಿಗಾಗಿ ತಮ್ಮನ ಕೊಲೆ: ಬೈಕ್‌ನಲ್ಲಿ ಮೃತದೇಹ ಸಾಗಿಸಿ ಸುಟ್ಟ ಅಣ್ಣ-ಭಾವ ಪೊಲೀಸ್ ವಶಕ್ಕೆ

Update: 2026-07-06 20:24 IST

ಬಂಧಿತ ಆರೋಪಿಗಳು

ಕನಕಗಿರಿ : ತಾಲೂಕಿನ ಚಿರ್ಚನಗುಡ್ಡ ತಾಂಡಾ ವ್ಯಾಪ್ತಿಯಲ್ಲಿ ಸುಟ್ಟುಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೃತನ ಅಣ್ಣ ಹಾಗೂ ಭಾವನನ್ನು ಬಂಧಿಸಿದ್ದಾರೆ.

ಜೂನ್ 5ರ ತಡರಾತ್ರಿ ಚಿರ್ಚನಗುಡ್ಡ ತಾಂಡಾದ ಸರ್ವೆ ನಂ. 26ರಲ್ಲಿ ಸುಟ್ಟುಹಾಕಿದ ಶವ ಪತ್ತೆಯಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಎಫ್‌ಎಸ್‌ಎಲ್ ತಂಡ ಸ್ಥಳ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿತ್ತು.

ಡಿವೈಎಸ್‌ಪಿ ನೇತೃತ್ವದಲ್ಲಿ ರಚಿಸಲಾದ ಎರಡು ವಿಶೇಷ ತನಿಖಾ ತಂಡಗಳು ಜಿಲ್ಲೆಯ ವಿವಿಧೆಡೆ ನಾಪತ್ತೆಯಾದವರ ಮಾಹಿತಿ ಪರಿಶೀಲಿಸಿದಾಗ, ಗಂಗಾವತಿ ತಾಲೂಕಿನ ಕೇಸರಟ್ಟಿ ಗ್ರಾಮದ ದೇವರಾಜ ಮಾಲಿಪಾಟೀಲ್ (33) ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ತನಿಖೆಯಲ್ಲಿ ದೇವರಾಜ ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬಂದು ಆಸ್ತಿ ವಿಚಾರವಾಗಿ ಗಲಾಟೆ ಮಾಡುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಬೇಸತ್ತ ಅಣ್ಣ ಅಯ್ಯನಗೌಡ ಮಾಲಿಪಾಟೀಲ್ ಹಾಗೂ ಭಾವಮೈದುನ ಗಂಗಾಧರ ಮಾಲಿಪಾಟೀಲ್ ಜೂನ್ 28ರಂದು ರಾತ್ರಿ ದೇವರಾಜನ ಮೇಲೆ ಹಲ್ಲೆ ನಡೆಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಲೆ ಮುಚ್ಚಿಹಾಕುವ ಉದ್ದೇಶದಿಂದ ಆರೋಪಿಗಳು ಮೃತದೇಹವನ್ನು ಚೀಲದಲ್ಲಿ ಮುಚ್ಚಿ ಬೈಕ್‌ನಲ್ಲಿ ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿರ್ಚನಗುಡ್ಡ ಗ್ರಾಮದ ಸರ್ವೆ ನಂ. 26ಕ್ಕೆ ಕೊಂಡೊಯ್ದು, ಬೈಕ್‌ನ ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆಸಿ ಶವ ಸುಟ್ಟುಹಾಕಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಲಕ್ಷ್ಮಣ್ ಅರಸಿದ್ದಿ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News