ಕನಕಗಿರಿ | ಸರ್ಕಾರದ ಸೌಲಭ್ಯ ಅರ್ಹರಿಗೆ ತಲುಪಿಸಿ : ಚಂದ್ರಶೇಖರ್ ಗಾಳಿ
ಕರಡೋಣಿಯಲ್ಲಿ ಪ್ರಜಾ ಸೇವಾ ಆಂದೋಲನ ಸಭೆ
ಕನಕಗಿರಿ: ತಾಲೂಕಿನ ಕರಡೋಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಪ್ರಜಾ ಸೇವಾ ಆಂದೋಲನ ಸಭೆ ನಡೆಯಿತು.
ಗಿಡಕ್ಕೆ ನೀರು ಹಾಕುವ ಮೂಲಕ ತಹಶೀಲ್ದಾರ್ ಚಂದ್ರಶೇಖರ್ ಗಾಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ. ರಾಜಶೇಖರ್ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೌಲಭ್ಯಗಳ ಕುರಿತು ಅರಿವು ಮೂಡಿಸುವುದು ಹಾಗೂ ಸಾರ್ವಜನಿಕರ ಕುಂದುಕೊರತೆಗಳಿಗೆ ಸೂಕ್ತವಾಗಿ ಸ್ಪಂದಿಸುವುದು ಪ್ರಜಾ ಸೇವಾ ಆಂದೋಲನದ ಪ್ರಮುಖ ಉದ್ದೇಶವಾಗಿದೆ. ಗ್ರಾಮಸ್ಥರು ಸಭೆಯ ಸದುಪಯೋಗ ಪಡೆದುಕೊಂಡು ತಮ್ಮ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವಪ್ಪ ಹಂಚಿನಾಳ, ಸಿಡಿಪಿಒ ವಿಜಯಲಕ್ಷ್ಮಿ ಹಿರೇಮಠ, ಅರಣ್ಯ ಇಲಾಖೆ ಅಧಿಕಾರಿ ಬಸವರಾಜ್ ಪೂಜಾರಿ, ಎಪಿಎಂಸಿ ಕಾರ್ಯದರ್ಶಿ ಸಾವಿತ್ರಿ ಪಾಟೀಲ್, ಆರೋಗ್ಯ ಇಲಾಖೆ ಅಧಿಕಾರಿ ಡಾ. ಗೌರಿಶಂಕರ್, ನೋಂದಣಿ ಇಲಾಖೆಯ ಎಸ್‌ಡಿಎ ಶ್ರೀಶೈಲಾ, ಪೊಲೀಸ್ ಇಲಾಖೆಯ ಎಎಸ್‌ಐ ರಾಮಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಒಟ್ಟು 138 ಅರ್ಜಿ ಸಲ್ಲಿಕೆ :
ಸಭೆಯಲ್ಲಿ ವಿವಿಧ ಇಲಾಖೆಗಳ ಸಂಬಂಧಿಸಿದಂತೆ ಒಟ್ಟು 138 ಅರ್ಜಿಗಳು ಸಲ್ಲಿಕೆಯಾಗಿವೆ. ಜೆಸ್ಕಾಂಗೆ 6, ಸಾರಿಗೆ ಇಲಾಖೆಗೆ 3, ಶಿಕ್ಷಣ ಇಲಾಖೆಗೆ 5, ಸಮಾಜ ಕಲ್ಯಾಣ ಇಲಾಖೆಗೆ 2, ಅಬಕಾರಿ ಇಲಾಖೆಗೆ 1, ಅರಣ್ಯ ಇಲಾಖೆಗೆ 1, ಕೃಷಿ ಇಲಾಖೆಗೆ 1, ಪಶುಸಂಗೋಪನೆ ಇಲಾಖೆಗೆ 1, ಆರ್‌ಡಿಪಿಆರ್ ಇಲಾಖೆಗೆ 7, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 2, ಪಂಚಾಯತ್ ರಾಜ್ ಇಲಾಖೆಗೆ 78, ಕಾರ್ಮಿಕ ಇಲಾಖೆಗೆ 1, ಆಹಾರ ಇಲಾಖೆಗೆ 1, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 1, ಕಂದಾಯ ಇಲಾಖೆಗೆ 27 ಹಾಗೂ ಲೋಕೋಪಯೋಗಿ ಇಲಾಖೆಗೆ 1 ಅರ್ಜಿ ಸಲ್ಲಿಸಲಾಗಿದೆ.