ಕುಕನೂರು | ಮಕ್ಕಳಿಗೆ ಹಕ್ಕುಗಳು ಮತ್ತು ರಕ್ಷಣಾ ಕಾನೂನುಗಳ ಅರಿವು ಅಗತ್ಯ : ಬೋರಣ್ಣವರ
ಕುಕನೂರು: ಮಕ್ಕಳಿಗೆ ಶಿಕ್ಷಣದ ಜೊತೆಗೆ ತಮ್ಮ ಹಕ್ಕುಗಳು ಹಾಗೂ ರಕ್ಷಣೆಗಾಗಿ ಇರುವ ಕಾನೂನುಗಳ ಬಗ್ಗೆಯೂ ಅರಿವು ಇರಬೇಕು. ತಂಬಾಕು, ಗುಟ್ಕಾ, ಸಿಗರೇಟ್ ಸೇರಿದಂತೆ ಎಲ್ಲ ದುಶ್ಚಟಗಳಿಂದ ದೂರವಿರಬೇಕು ಎಂದು ಬೋರಣ್ಣವರ ಅವರು ಸಲಹೆ ನೀಡಿದರು.
ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಪಿಎಂಶ್ರೀ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮೇಲೆ ದೌರ್ಜನ್ಯ ಅಥವಾ ಶೋಷಣೆ ನಡೆದರೆ ಮೌನವಾಗಿರದೆ ಶಿಕ್ಷಕರು, ಪೋಷಕರು ಹಾಗೂ ಸಹಾಯವಾಣಿಯ ನೆರವು ಪಡೆಯಬೇಕು ಎಂದು ತಿಳಿಸಿದರು.
ಮುಖ್ಯಶಿಕ್ಷಕ ರಾಮರಡ್ಡಪ್ಪ ಹಾಲಕೇರಿ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ವಿಭಾಗ, ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳು ಇದೇ ಉತ್ಸಾಹದಿಂದ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರು ಮಕ್ಕಳಿಗಾಗಿ ವಿಶೇಷ ಸಿಹಿ ಊಟೋಪಚಾರದ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಗುಲಗಣ್ಣವರ, ಗೀತಾ ಸಜ್ಜನ್, ಶೈಲಜಾ ಹತ್ತಿಕಟಗಿ, ಮಮ್ತಾಜ್ ಬೇಗಂ ಗಡಾದ್, ಮುರಾರಿ ಭಜಂತ್ರಿ, ಶ್ರೀಕಾಂತ ಪೂಜಾರಿ, ಪುಷ್ಪಾವತಿ ಕಳ್ಳಿಮಠ, ಸಂತೋಷ್ ಕುಮಾರಿ, ರೋಹಿಣಿ, ರಂಗಪ್ಪ ಓಲೆಕಾರ್ ಹಾಗೂ ವಿರೂಪಾಕ್ಷಪ್ಪ ಮ್ಯಾಳಿ ಸೇರಿದಂತೆ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.