Koppal | ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ರಾಜ್ಯ ಮಟ್ಟಕ್ಕೆ 49 ವಿದ್ಯಾರ್ಥಿಗಳು ಆಯ್ಕೆ
ಕೊಪ್ಪಳ: ಶಾಲಾ ಶಿಕ್ಷಣ ಇಲಾಖೆ, ನ್ಯಾಷನಲ್ ಸ್ಪಿರಿಟ್ ಕರಾಟೆ ಅಕಾಡೆಮಿ ಹಾಗೂ ಕೊಪ್ಪಳ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಯಶಸ್ವಿಯಾಗಿ ಜರುಗಿತು.
ಅಂಡರ್-14 ಹಾಗೂ ಅಂಡರ್-17 ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಜಿಲ್ಲೆಯಾದ್ಯಂತ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕರಾಟೆ ಕೌಶಲವನ್ನು ಪ್ರದರ್ಶಿಸಿದರು. ವಿವಿಧ ತೂಕ ಹಾಗೂ ವಯೋಮಿತಿಯ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದ ಒಟ್ಟು 49 ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿಶೇಷವಾಗಿ ಅಂಡರ್-14 ವಿಭಾಗದಲ್ಲಿ ಪಾಲ್ಗೊಂಡಿದ್ದ ವರ್ಷಾ ಶಿವಾನಂದ ಪ್ಯಾಟಿ ಅವರು ಅತ್ಯುತ್ಸಾಹ ಹಾಗೂ ಶಿಸ್ತಿನಿಂದ ಸ್ಪರ್ಧಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವರ್ಷಾ ಸೇರಿದಂತೆ ಎಲ್ಲ ವಿಜೇತ ಸ್ಪರ್ಧಾಳುಗಳಿಗೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಕರಾಟೆ ತರಬೇತುದಾರರಾದ ರಾಜಾಭಕ್ಷಿ ಎಚ್.ವಿ., ಮಹಾಂತೇಶ ಎಂ., ಮಹೇಬೂಬ್ ಹುಸೇನ್, ಶಿವಾನಂದ, ಷಣ್ಮುಖ ಹಾಗೂ ಸೈಯದ್ ಬಿಲಾಲ್ ಸೇರಿದಂತೆ ಗಣ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು. ಮುಂಬರುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿಯೂ ಇದೇ ರೀತಿಯ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಹೆಮ್ಮೆ ತರುವಂತೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.