Koppal | ಕುಕನೂರು ಹೋಬಳಿಯಲ್ಲಿ ಬೆಳೆ ಪರಿವೀಕ್ಷಣೆ ಕಾರ್ಯಕ್ರಮ
ಮಳೆ ಕೊರತೆಯಲ್ಲಿ ಬೆಳೆ ಉಳಿವಿನ ತಂತ್ರಜ್ಞಾನ ಕುರಿತು ರೈತರಿಗೆ ಮಾರ್ಗದರ್ಶನ
ಕೊಪ್ಪಳ : ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ ವತಿಯಿಂದ ಕುಕನೂರು ಹೋಬಳಿಯಲ್ಲಿ ಬುಧವಾರ ಬೆಳೆ ಪರಿವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಳೆ ಕೊರತೆಯ ಪರಿಸ್ಥಿತಿಯಲ್ಲಿ ಬೆಳೆಗಳನ್ನು ಸಂರಕ್ಷಿಸುವ ತಾಂತ್ರಿಕತೆಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಸಕ್ತ ಬರದಂತಹ ಪರಿಸ್ಥಿತಿಯಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ಅನುಸರಿಸಬೇಕಾದ ಕೃಷಿ ತಂತ್ರಜ್ಞಾನಗಳು ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಪರ್ಯಾಯ ಬೆಳೆಗಳನ್ನು ಬೆಳೆಯುವ ಬಗ್ಗೆ ರೈತರಿಗೆ ಸವಿಸ್ತಾರವಾಗಿ ತಿಳಿಸಲಾಯಿತು.
ಉಪ ಕೃಷಿ ನಿರ್ದೇಶಕ ಸಿದ್ದೇಶ್ವರ ಮಾತನಾಡಿ, ರೈತರು ಬೆಳೆ ವಿಮೆ ಯೋಜನೆಯ ಸೌಲಭ್ಯಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು. ಜೊತೆಗೆ ಕಪ್ಪು ಮಣ್ಣಿನಲ್ಲಿ ಮರಳು (ಉಸುಕು) ಬಳಕೆಯಿಂದಾಗುವ ಪ್ರಯೋಜನಗಳು ಹಾಗೂ ಅದರ ದುಷ್ಪರಿಣಾಮಗಳ ಕುರಿತು ರೈತರೊಂದಿಗೆ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ರೈತರಾದ ಶರಣಪ್ಪ ಮೇಟಿ, ಶೇಖಪ್ಪ ಅಸೂತಿ, ಆತ್ಮಾ ಯೋಜನೆಯ ಜಿ.ಡಿ. ಕೊಳಜಿ ಹಾಗೂ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಬದರಿ ಪ್ರಸಾದ್ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.