Koppal | ನೀಟ್‌ನಲ್ಲಿ ದೇಶಕ್ಕೆ 694ನೇ ರ‍್ಯಾಂಕ್; ಪುಟ್ಟರಾಜುಗೆ ಕರವೇಯಿಂದ ಸನ್ಮಾನ
ಕೊಪ್ಪಳ : ನೀಟ್-2026 ಪರೀಕ್ಷೆಯಲ್ಲಿ ಎಸ್‌ಟಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 694ನೇ ರ‍್ಯಾಂಕ್ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ ತಾಲೂಕಿನ ಹನುಮನಹಳ್ಳಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಪುಟ್ಟರಾಜು ಭೀಮನೂರು ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಬಿ. ಗಿರೀಶಾನಂದ ಜ್ಞಾನಸುಂದರ ಅವರು ಬುಧವಾರ ಪುಟ್ಟರಾಜು ಅವರ ತೋಟದ ಮನೆಗೆ ಭೇಟಿ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿದರು.
ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯಲ್ಲಿಯೇ ಕುರಿ ಕಾಯುತ್ತಾ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತಂದೆಗೆ ನೆರವಾಗುತ್ತಾ ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಅಭ್ಯಾಸದ ಮೂಲಕ ಈ ಅಪೂರ್ವ ಸಾಧನೆ ಮಾಡಿರುವುದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಈ ಹಿಂದೆ ದ್ವಿತೀಯ ಪಿಯುಸಿಯಲ್ಲಿ ಶೇ.98 ಅಂಕ ಗಳಿಸಿ ಪ್ರತಿಭೆ ಮೆರೆದಿದ್ದ ಪುಟ್ಟರಾಜು, ಇದೀಗ ನೀಟ್ ಪರೀಕ್ಷೆಯಲ್ಲೂ ರಾಷ್ಟ್ರಮಟ್ಟದಲ್ಲಿ ಉತ್ತಮ ರ‍್ಯಾಂಕ್ ಗಳಿಸುವ ಮೂಲಕ ಕೊಪ್ಪಳ ಜಿಲ್ಲೆಯ ಹೆಸರನ್ನು ದೇಶದ ಮಟ್ಟದಲ್ಲಿ ಬೆಳಗಿಸಿದ್ದಾರೆ. ಕಠಿಣ ಪರಿಶ್ರಮ, ದೃಢಸಂಕಲ್ಪ ಹಾಗೂ ಗುರಿಯ ಮೇಲಿನ ಅಚಲ ನಿಷ್ಠೆ ಇದ್ದರೆ ಯಾವುದೇ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ಪುಟ್ಟರಾಜು ಅವರ ಸಾಧನೆಯೇ ಸಾಕ್ಷಿಯಾಗಿದೆ ಎಂದು ಬಿ. ಗಿರೀಶಾನಂದ ಜ್ಞಾನಸುಂದರ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಹುಸೇನಬಾಶಾ ಮಣ್ಣೂರು, ಜಿಲ್ಲಾ ಗೌರವ ಸಲಹೆಗಾರ ಗವಿಸಿದ್ದಪ್ಪ ಹಂಡಿ, ಸಾಮಾಜಿಕ ಜಾಲತಾಣ ಸಂಚಾಲಕ ರಮೇಶ ಬೂದಗುಂಪಿ, ವಿದ್ಯಾರ್ಥಿಯ ಪಾಲಕರಾದ ಮಹಾಬಳೇಶ ಭೀಮನೂರು, ಸುವರ್ಣಮ್ಮ, ಗ್ರಾ.ಪಂ ಸದಸ್ಯ ದೊಡ್ಡಯಮನೂರಪ್ಪ ಬಗನಾಳ, ಎಸ್.ಡಿ.ಎಮ್.ಸಿ ಅಧ್ಯಕ್ಷ ಶಿವಪ್ಪ ಭೀಮನೂರು, ಗ್ರಾಮದ ಮುಖಂಡರಾದ ಮುತ್ತು ನಾಯಕ, ಪರಮೇಶ ಹಲಗೇರಿ, ಹಾಗೂ ಅನೇಕರು ಉಪಸ್ಥಿತರಿದ್ದರು.