Kuknoor | ಜಾನಪದ ಪರಂಪರೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ: ಡಾ.ಗೊಲ್ಲಹಳ್ಳಿ ಶಿವಪ್ರಸಾದ
‘ಜ್ಯೋತಿ ಆಗು ಜಗಕ್ಕೆಲ್ಲ’ ಜಾನಪದ ವೈಭವಕ್ಕೆ ಮುಂಡರಗಿಯಲ್ಲಿ ಅದ್ದೂರಿ ಚಾಲನೆ
ಕುಕನೂರು, ಆ.5: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ “ಜ್ಯೋತಿ ಆಗು ಜಗಕ್ಕೆಲ್ಲ – ಜ್ಞಾನಪದ ಬೆಳಗು” ಹಾಡುಗಳ ಜಾನಪದ ವೈಭವ ಕಾರ್ಯಕ್ರಮ ಮಂಗಳವಾರ ಮುಂಡರಗಿ ಪಟ್ಟಣದ ಅನ್ನದಾನೇಶ್ವರ ಶಾಖಾ ಮಠದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೂ ಮುನ್ನ ಶಿರೂರು ವೀರಭದ್ರಪ್ಪ ವೃತ್ತದಿಂದ ಅನ್ನದಾನೇಶ್ವರ ಶಾಖಾ ಮಠದವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ವರ್ಣರಂಜಿತ ಮೆರವಣಿಗೆ ನಡೆಯಿತು. ಡೊಳ್ಳು, ತಮಟೆ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳ ನಾದಕ್ಕೆ ಕಲಾವಿದರು ಹೆಜ್ಜೆ ಹಾಕಿದರೆ, ಜಾನಪದ ವೇಷಭೂಷಣಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಗೊಲ್ಲಹಳ್ಳಿ ಶಿವಪ್ರಸಾದ ಅವರು ಡೊಳ್ಳು ಬಾರಿಸಿ, ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಕಲೆಗಳು ಅನೇಕ ಸಂಕಷ್ಟಗಳನ್ನು ಮೆಟ್ಟಿ ಇಂದಿಗೂ ಸಮಾಜದಲ್ಲಿ ಗಟ್ಟಿಯಾಗಿ ಉಳಿದಿವೆ. ಹಿರಿಯರು ಕೊಟ್ಟ ಅಮೂಲ್ಯ ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ್ ಮಾತನಾಡಿ, ಜಾನಪದ ಕಲೆ ಮತ್ತು ಸಂಸ್ಕೃತಿ ನಮ್ಮ ಸಮಾಜದ ಜೀವನಾಡಿಯಾಗಿದ್ದು, ಯುವ ಪೀಳಿಗೆಗೆ ಅದರ ಮಹತ್ವ ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಮುಂಡರಗಿ ಅನ್ನದಾನೇಶ್ವರ ಶಾಖಾ ಮಠದ ಡಾ. ಮಹಾದೇವ ಸ್ವಾಮೀಜಿ ಮಾತನಾಡಿ, ಜಾನಪದ ಹಾಗೂ ಭಜನಾ ಕಲಾವಿದರನ್ನು ಸರ್ಕಾರ ಗುರುತಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಕಲಾವಿದರಿಗಾಗಿ ಜೀವ ವಿಮೆ ಯೋಜನೆ ಜಾರಿಗೊಳಿಸುವ ಮೂಲಕ ಅವರ ಜೀವನ ಭದ್ರತೆಗೆ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಾಜ ಸೇವಕ ಕಳಕಪ್ಪ ಕಂಬಳಿ, ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ ಹಾಗೂ ಅಕಾಡೆಮಿ ಸದಸ್ಯ ಡಾ. ಜೀವನಸಾಬ್ ವಾಲಿಕಾರ ಬಿನ್ನಾಳ ಅವರು ಜಾನಪದ ಕಲೆಗಳ ಸಂರಕ್ಷಣೆ, ಕಲಾವಿದರಿಗೆ ಪ್ರೋತ್ಸಾಹ ಹಾಗೂ ಸಾಂಸ್ಕೃತಿಕ ಪರಂಪರೆಯ ಮಹತ್ವ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶರಣಪ್ಪ ಚಳ್ಳಮರದ ಮತ್ತು ತಂಡ, ದೇವಪ್ಪ ಮುತ್ತಾಳ ಮತ್ತು ತಂಡ, ಮುದುಕವ್ವ ಮಾದರ ಮತ್ತು ತಂಡ, ತಿಪ್ಪಣ್ಣ ಅಂಬಾಜಿ ಸುಗತೇಕರ್ ಮತ್ತು ತಂಡ, ಯುವರಾಜ್ ಹಿರೇಮಠ ಮತ್ತು ತಂಡ, ರಾಚಮ್ಮ ನಿಂಗಾಪುರ ಮತ್ತು ತಂಡ ಹಾಗೂ ಕವಿತಾ ಚೋಳಿನ ಮತ್ತು ತಂಡಗಳು ವಿವಿಧ ಜಾನಪದ ಗೀತೆಗಳು ಹಾಗೂ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಶರಣಪ್ಪ ವಡಗೇರಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಹಿಬೂಬ್‌ಸಾಬ್ ಕಿಲ್ಲೇದಾರ್, ಸಾಹಿತಿ ಕೆ. ಬಿ. ಬ್ಯಾಳಿ, ತತ್ವಪದಕಾರ ಹಾಗೂ ಸಾಹಿತಿ ಆರ್. ಪಿ. ರಾಜೂರ, ಕಲಾವಿದ ಶರಣಯ್ಯ ಇಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರು, ಸಾರ್ವಜನಿಕರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.