×
Ad

ಕೊಪ್ಪಳ | ಕಂಬಕ್ಕೆ ಕಟ್ಟಿ ಮಾದಿಗ ಯುವಕನಿಗೆ ಮಾರಣಾಂತಿಕ ಹಲ್ಲೆ ಆರೋಪ : ಪ್ರಕರಣ ದಾಖಲು

Update: 2024-09-13 21:05 IST
ಯುವಕನ ಮೇಲೆ ಹಲ್ಲೆ

ಕೊಪ್ಪಳ: ಮಾದಿಗ ಯುವಕನೊಬ್ಬನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಕೊಪ್ಪಳ ತಾಲೂಕಿನ ಬೋಚನ ಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಸಂಬಂಧ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸಂತ್ರಸ್ತ ಯುವಕನನ್ನು ಗುಡದಪ್ಪ ಮುಳ್ಳಣ್ಣ(21) ಎಂದು ಗುರುತಿಸಲಾಗಿದೆ.

“ಸೆ.9ರಂದು ಬೆಳಗ್ಗೆ ಗ್ರಾಮದ ಕಟ್ಟೆಯ ಮೇಲೆ ಕುಳಿತು ಸಿಗರೇಟ್ ಸೇದುತ್ತಿದ್ದಾಗ ಅಲ್ಲಿಗೆ ಬಂದ ಯುವಕರ ಗುಂಪು ಸಿಗರೇಟ್ ಸೇದಬಾರದು ಎಂದು ನನ್ನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆದರೆ ನಾನು ಭಯಗೊಂಡು ಅಲ್ಲಿಂದ ಮನೆ ಕಡೆಗೆ ಹೋದೆ. ಅದೇ ದಿನ ಸಂಜೆ ಗಣಪತಿ ವಿಸರ್ಜನೆ ವೀಕ್ಷಿಸಲು ಹೋದಾಗ ಮದ್ಯ ಸೇವಿಸಿದ್ದ ಯುವಕರ ಗುಂಪು ನನ್ನ ಮೇಲೆ ಹಲ್ಲೆ ಮಾಡಿ, ತಲೆಗೆ ಹೊಡೆದಿದ್ದಾರೆ. ಬಳಿಕ ತೊಟ್ಟಿದ್ದ ಬಟ್ಟೆಯನ್ನು ಬಿಚ್ಚಿಸಿದ್ದಾರೆ. ಕಂಬಕ್ಕೆ ಕಟ್ಟಿ ಚಪ್ಪಲಿಯಿಂದ ಹೊಡೆದಿದ್ದಾರೆ” ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಸಂತ್ರಸ್ತ ಯುವಕ ಗುಡದಪ್ಪ ವಿವರಿಸಿದ್ದಾರೆ.

ಗ್ರಾಮದ ನಾಗನಗೌಡ, ಯಲ್ಲಪ್ಪ, ಭೀಮಪ್ಪ, ಹನುಮಗೌಡ , ಪ್ರಜ್ವಲ್ ಹಾಗೂ ನವೀನ್ ಆರೋಪಿಗಳು ಎಂದು ತಿಳಿದು ಬಂದಿದೆ.

ಈ ಸಂಬಂಧ ಅಳವಂಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಒಟ್ಟು 6 ಜನ ಆರೋಪಿಗಳ ಪೈಕಿ ಮೂವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೆ, ಸಂತ್ರಸ್ತ ಯುವಕ ಸೇರಿ ಆರು ಮಂದಿಯ ವಿರುದ್ಧ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News