ಕೊಪ್ಪಳ | ಮೊರಾರ್ಜಿ ವಸತಿ ಶಾಲೆಯ 4 ವಿದ್ಯಾರ್ಥಿಗಳು ನಾಪತ್ತೆ
ಕೊಪ್ಪಳ/ಕುಷ್ಟಗಿ : ತಾಲ್ಲೂಕಿನ ಮೇಣದಾಳ ಗ್ರಾಮದಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 4 ಮಕ್ಕಳು ಕಾಣೆಯಾಗಿರುವ ಘಟಣೆ ಸೋಮವಾರ ರಾತ್ರಿ ನಡೆದಿದೆ.
ಎಸೆಸೆಲ್ಸಿಯಲ್ಲಿ ವಿಧ್ಯಬ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದ ಕಾರಣಕ್ಕೆ ಭಯಗೊಂಡಿದ್ದರು ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ ಊಟದ ನಂತರ ವಸತಿ ಶಾಲೆ ಕೊಠಡಿ ಹಿಂಬಾಗಿಲ ಮೂಲಕ ಕಾಂಪೌಂಡ್ ಮೇಲಿನಿಂದ ಹಾರಿಹೋಗಿರುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ವಿದ್ಯಾರ್ಥಿಗಳಾದ ಎಂ. ರಾಂಪುರ ಗ್ರಾಮದ ಮನು ಕಡೇಮನಿ, ಚಿಕ್ಕ ವಂಕಲಕುಂಟಾ ಗ್ರಾಮದ ಗುರುರಾಜ, ಗುಮಗೇರಾ ಗ್ರಾಮದ ನೀಲಕಂಠ ಹಾಗೂ ಯಲಬುರ್ಗಾ ಪಟ್ಟಣದ ವಿಶ್ವ ಕಾಣೆಯಾದ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳ ಪೋಷಕರನ್ನು ವಿಚಾರಿಸಲಾಗಿದ್ದು, ಮನೆಗೂ ಹೋಗಿಲ್ಲ. ಸುತ್ತಲಿನ ಗ್ರಾಮಗಳಲ್ಲಿ ಹುಡುಕಿದರೂ ಸಿಕ್ಕಿಲ್ಲ. ವಿದ್ಯಾರ್ಥಿಗಳು ಕೆಲಸ ಮಾಡಲು ದೂರದ ಪಟ್ಟಣಗಳಿಗೆ ಹೋಗುತ್ತೇವೆ ಎಂದು ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳ ನಾಪತ್ತೆ ಕುರಿತು. ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಪರಿಚಿತರು ವಿದ್ಯಾರ್ಥಿಗಳನ್ನು ಅಪಹರಿಸಿರಬಹುದು ಎಂದು ಶಂಕೆ ಪಾಲಕರಲ್ಲಿ ವ್ಯಕ್ತವಾಗಿದೆ.