×
Ad

ಕೊಪ್ಪಳ | ಬೈಕ್‌ಗೆ ಲಾರಿ ಢಿಕ್ಕಿ ; ದಂಪತಿ ಮೃತ್ಯು

Update: 2024-12-11 18:55 IST

ಸಾಂದರ್ಭಿಕ ಚಿತ್ರ

ಕೊಪ್ಪಳ : ಬೈಕಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಪತಿ-ಪತ್ನಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕೇಸರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಮರಕುಂಬಿ ಗ್ರಾಮದ ಮಂಜುನಾಥ ಪರಸಪ್ಪ ನಾಯಕ್ (38) ಹಾಗೂ ಆತನ ಪತ್ನಿ ನೇತ್ರಾವತಿ ಮಂಜುನಾಥ ನಾಯಕ್ (33) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಒಬ್ಬ ಬಾಲಕ ತೀವ್ರ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರ್ತು ಕೆಲಸದ ನಿಮಿತ್ತ ಮೂವರು ಗ್ರಾಮದಿಂದ ಒಂದೇ ಬೈಕಿನಲ್ಲಿ ಗಂಗಾವತಿಗೆ ಹೊರಟಿದ್ದರು. ಮಾರ್ಗ ಮಧ್ಯೆ ಬೈಕಿಗೆ ಪೆಟ್ರೋಲ್ ಹಾಕಿಸುವ ಉದ್ದೇಶಕ್ಕೆ ಹೇರೂರು-ಕೆಸರಹಟ್ಟಿ ಮಧ್ಯೆ ಇರುವ ಪೆಟ್ರೋಲ್ ಬಂಕ್‍ನಲ್ಲಿ ಇಂಧನ ಹಾಕಿಸಿದ್ದಾರೆ.

ಬಳಿಕ ಬಂಕ್‍ನಿಂದ ರಸ್ತೆಗೆ ಬರುವ ಸಂದರ್ಭದಲ್ಲಿ ಎದುರಿನಿಂದ ವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಢಿಕ್ಕಿ ರಭಸಕ್ಕೆ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಬಾಲಕ ಮಂಜುನಾಥನು ಮೂರ್ನಾಲ್ಕು ಅಡಿ ಹಾರಿ ಮುಳ್ಳಿನ ಪೊದೆಯಲ್ಲಿ ಬಿದ್ದಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News