×
Ad

ಕೊಪ್ಪಳ | ದಲಿತರು ಕ್ಷೌರ ಮಾಡಲು ಕೇಳಿದ್ದಕ್ಕೆ ಅಂಗಡಿಯನ್ನೇ ಮುಚ್ಚಿದ ಕ್ಷೌರಿಕರು : ಆರೋಪ

Update: 2025-05-07 16:29 IST

ಸಾಂದರ್ಭಿಕ ಚಿತ್ರ

ಕೊಪ್ಪಳ : ಜಿಲ್ಲೆಗೆ ಅಸ್ಪೃಶ್ಯತೆ ಎನ್ನುವುದು ದೊಡ್ಡ ಪಿಡುಗು ಆಗಿ ಪರಿಣಮಿಸಿದೆ, ಹಿಂದೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕ್ಷೌರ ಮಾಡಲು ಕೇಳಿದಕ್ಕೆ ಕತ್ತರಿಯಿಂದ ಇರಿದು ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ಜಿಲ್ಲಾ ಕೇಂದ್ರದಿಂದ ಕೇವಲ 7 ಕಿ.ಮೀ. ದೂರದಲ್ಲಿರುವ ಮುದ್ದಾಬಳ್ಳಿ ಗ್ರಾಮದಲ್ಲಿ ದಲಿತರು ಕ್ಷೌರ ಮಾಡುವಂತೆ ಕೇಳಿದ್ದಕ್ಕೆ ಕ್ಷೌರದ ಅಂಗಡಿಗಳನ್ನೇ ಮುಚ್ಚಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

‘ಎಲ್ಲರಿಗೆ ಕ್ಷೌರ ಮಾಡಿದಂತೆ ನಮಗೂ ಕ್ಷೌರ ಮಾಡಬೇಕು’ ಎಂದು ಗ್ರಾಮದ ದಲಿತ ಯುವಕರು ಕೇಳಿದ್ದರು ಎನ್ನಲಾಗಿದೆ. ಅದಕ್ಕೆ ಮೊದಲು ಕ್ಷೌರಿಕರು ನಿರಾಕರಿಸಿದ್ದರು. ಇದು ಮಾತಿನ ಜಗಳಕ್ಕೂ ಕಾರಣವಾಗಿತ್ತು. ಆಗ ಮಧ್ಯಪ್ರವೇಶಿಸಿದ್ದ ಪೊಲೀಸರು ಅಸ್ಪೃಶ್ಯತೆ ಆಚರಣೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿ ಎಲ್ಲರಿಗೂ ಕಡ್ಡಾಯವಾಗಿ ಕ್ಷೌರ ಮಾಡಬೇಕು ಎಂದು ಸೂಚಿಸಿದ್ದರು ಅದನ್ನು ಕ್ಷೌರಿಕರು ಒಪ್ಪಿಕೊಂಡಿದ್ದರು ಎನ್ನಲಾಗಿದೆ.

ಇವಾಗ ಮತ್ತೆ ದಲಿತರನ್ನು ಹೊರತುಪಡಿಸಿ ಉಳಿದವರ ಮನೆ ಮನೆಗೆ ಹೋಗಿ ಕ್ಷೌರ ಮಾಡಲಾಗುತ್ತಿದ್ದೆ, ಎನ್ನುವ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

ಈ ಗ್ರಾಮದಲ್ಲಿ ಎರಡು ಕ್ಷೌರದ ಅಂಗಡಿಗಳು ಹಾಗೂ ಒಂದೆರಡು ಹೋಟೆಲ್‌ಗಳು ಇವೆ. ಹೋಟೆಲ್‌ಗಳ ಮಾಲಕರು ಅಸ್ಪೃಶ್ಯತೆ ಆಚರಣೆ ಮಾಡಿದಕ್ಕೆ ಪೊಲೀಸರು ಎಚ್ಚರಿಕೆ ನೀಡಿದ್ದರು, ಬಳಿಕ ಅಲ್ಲಿ ಎಲ್ಲರಿಗೂ ಅವಕಾಶ ನೀಡಲಾಗುತ್ತಿದೆ. ಇವಾಗ ಗ್ರಾಮದ ಕ್ಷೌರದ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ಅಲ್ಲಿನ ದಲಿತರು ಕೊಪ್ಪಳಕ್ಕೆ ಬಂದು ಕ್ಷೌರ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ, ಇದಕ್ಕೆ ಜಿಲ್ಲಾಡಳಿತದ ವೈಫಲ್ಯವೇ ಕಾರಣ ಎಂದು ಚಿಂತಕರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News