ಕೊಪ್ಪಳ | ದಲಿತ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ : ಮೂವರ ಬಂಧನ
ಹಲ್ಲೆಗೊಳಗಾದ ಯುವಕ
ಕೊಪ್ಪಳ/ಗಂಗಾವತಿ : ದಲಿತ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಗಂಗಾವತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಸಂಗಾಪೂರ ಗ್ರಾಮದ ನಿವಾಸಿ ಸಿದ್ದು ಭೋವಿ ಹಲ್ಲೆಗೊಳಗಾದ ಯುವಕ ಎಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ಯುವಕನ ಸಹೋದರ ನೀಡಿದ ದೂರಿನ ಮೇಲೆ ಪೊಲೀಸರು ಒಟ್ಟು ಹತ್ತು ಜನರ ಮೇಲೆ ಪ್ರಕರಣ ದಾಖಲಿಸಿದ್ದು, ಈವರೆಗೆ ಮೂರು ಜನರನ್ನು ಬಂಧಿಸಲಾಗಿದೆ ಮತ್ತು ಉಳಿದವರಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಸಂಬಂದಿಕರನ್ನು ಬಿಟ್ಟು ಬರಲು ಡಿ.27ರ ರಾತ್ರಿ 11 ಗಂಟೆಗೆ ಗಂಗಾವತಿಗೆ ತೆರಳಿದ್ದ ಸಿದ್ದು ಭೋವಿ (ಹಲ್ಲೆಗೊಳಗಾದ ಯುವಕ) ಮತ್ತು ಆತನ ಸ್ನೇಹಿತರ ಮೇಲೆ ಮದ್ಯ ಸೇವಿಸಿದ್ದ ಗುಂಪು ಒಂದು ಅವರನ್ನು ಆಡ್ಡಗಟ್ಟಿ ಆವಾಚ್ಯ ಶಬ್ದಗಳಿಂದ ನಿಂದಿಸಿ, ಮದ್ಯದ ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ ಮತ್ತು ಅವರನ್ನು ಮನ ಬಂದಂತೆ ಥಳಿಸಿದ್ದಾರೆ. ಅವರು ಚೀರಾಡುವುದನ್ನು ನೊಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಮುಂಚೆ ಮಣ್ಣು ಸಾಗಿಸುವ ವಿಚಾರಕ್ಕೆ ಜಗಳ ನಡೆದಿತ್ತು ಎಂದು ತಿಳಿದು ಬಂದಿದೆ. ಸದ್ಯ ಹಲ್ಲೆಗೊಳಗಾದ ಯುವಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.