ಕೊಪ್ಪಳ ಡಿಡಿಪಿಐ ಶ್ರೀಶೈಲ್ ಬಿರಾದಾರ್ ಎತ್ತಂಗಡಿ, ಸೋಮಶೇಖರ್ ಪಾಟೀಲ್ ಗೆ ಪ್ರಭಾರಿ ಜವಾಬ್ದಾರಿ
ಶ್ರೀಶೈಲ್ ಬಿರಾದಾರ್, ಸೋಮಶೇಖರ್ ಗೌಡ ಪಾಟೀಲ್
ಕೊಪ್ಪಳ : ಶಿಕ್ಷಕರ ನಿಯೋಜನೆಯಲ್ಲಿ ಅಕ್ರಮದ ಆರೋಪ ಹೊತ್ತಿದ್ದ ಕೊಪ್ಪಳ ಡಿಡಿಪಿಐ ಶ್ರೀಶೈಲ್ ಬಿರಾದಾರ್ ಅವರನ್ನು ಸರ್ಕಾರ ಡಿಡಿಪಿಐ ಹುದ್ದೆಯಿಂದ ಬಿಡುಗಡೆ ಮಾಡಿದ್ದು, ಅವರ ಸ್ಥಾನಕ್ಕೆ ಯಲಬುರ್ಗಾ ಬಿಇಓ ಸೋಮಶೇಖರ್ ಗೌಡ ಪಾಟೀಲ್ ಅವರನ್ನು ಪ್ರಭಾರಿಯಾಗಿ ಉಪ ನಿರ್ದೇಶಕರಾಗಿ ತಕ್ಷಣ ಜಾರಿಗೆ ಬರುವಂತೆ ನೇಮಿಸಿ ಆದೇಶ ಹೊರಡಿಸಿದೆ.
ಈ ಹಿಂದಿನ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪ್ರಮುಖ ಪಾತ್ರದ ಆರೋಪವೂ ಶ್ರೀಶೈಲ್ ಬಿರಾದಾರ್ ಅವರ ಮೇಲಿದ್ದು, ಆ ಪ್ರಕರಣ ತನಿಖೆ ಹಂತದಲ್ಲಿದೆ. ಇದರ ಜೊತೆಗೆ ಕೊಪ್ಪಳ ಜಿಲ್ಲೆಯ ಹಲವಡೆ ಶಿಕ್ಷಕರ ನಿಯೋಜನೆಯಲ್ಲಿ ಹಣ ಪಡೆದ ಆರೋಪವೂ ಶ್ರೀಶೈಲ್ ಅವರ ಮೇಲೆ ಕೇಳಿ ಬಂದಿತ್ತು.
ದಿಡೀರ್ ಬೆಳವಣಿಗೆಯಲ್ಲಿ ಸರಕಾರ ಗುರುವಾರ ಶ್ರೀಶೈಲ್ ಬಿರಾದಾರ್ ಅವರನ್ನು ಕೊಪ್ಪಳ ಡಿಡಿಪಿಐ ಹುದ್ದೆಯಿಂದ ಬಿಡುಗಡೆಗೊಳಿಸಿ ಅದೇಶಿಸಲಾಗಿದ್ದು, ಅವರಿಗೆ ಯಾವುದೇ ಹುದ್ದೆ ತೋರಿಸದೇ ಸರ್ಕಾರಕ್ಕೆ ವರದಿ ಮಾಡುವಂತೆ ಸೂಚಿಸಲಾಗಿದೆ.
ಇವರ ಸ್ಥಾನಕ್ಕೆ ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೋಮಶೇಖರ್ ಗೌಡ ಪಾಟೀಲ್ ಅವರನ್ನು ಪ್ರಭಾರಿ ಡಿಡಿಪಿಐಯಾಗಿ ನೇಮಿಸಲಾಗಿದ್ದು ಶಿಕ್ಷಣ ಪ್ರೇಮಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.