ಕೊಪ್ಪಳ | ಲಾಚನಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಂದನಾ, ಸ್ನೇಹ ಸಮ್ಮಿಲನ
ಕೊಪ್ಪಳ : ಒಂದು ಸಾಮಾನ್ಯ ಮಗು ಸಮಾಜದ ಉನ್ನತ ಸ್ಥಾನವನ್ನು ಅಲಂಕರಿಸಲು ಅತ್ಯಂತ ಮುಖ್ಯವಾದದ್ದು ಶಿಕ್ಷಣ. ಗುರುವಿನ ಪ್ರೀತಿಯ ಶಿಕ್ಷೆಯಿಂದ ಮಾತ್ರ ಸಂಸ್ಕಾರಯುತ ಶಿಕ್ಷಣ ದೊರಕಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ಸಂಜೀವಪ್ಪ ವೀರಾಪುರ ಹೇಳಿದರು.
ತಾಲೂಕಿನ ಲಾಚನಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2003-04 ಮತ್ತು 2004-05ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಕಳೆದ ಜು.19ರ ಶನಿವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎಂಬುದು ಜನಜನಿತ. ಆದರೆ ಶಾಲೆಯಲ್ಲಿ ದೊರಕುವ ಶಿಕ್ಷಣ ಮಾತ್ರ ಮಗುವಿನ ಭವಿಷ್ಯದ ಭದ್ರ ಬುನಾದಿಯಾಗಿರುತ್ತದೆ. ಶಾಲೆಯಲ್ಲಿ ಶಿಕ್ಷಕರು ಹೊಡೆದು ಬಡೆದು ಕಲಿಸುವ ಪಾಠ ಮಗುವಿನ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಿಕ್ಷಕರಾದ ಹನುಮಂತರಾವ ಕಂಪ್ಲಿಕರ್, ರಾಘವೇಂದ್ರ ದೇಸಾಯಿ, ಬನಂಶಕರಿ ವೈದ್ಯ, ಬಸವರಾಜ ಉಮಚಗಿ, ಗಂಗಾಧರ ಕೊಡೇಕಲ್ಲ, ಶಿವಕುಮಾರ್ ಹಿರೇಮಠ, ಎಂ.ಯು.ರವಿಕುಮಾರ್ ಅವರುಗಳು ಮಾತನಾಡಿದರು.
ಲಾಚನಕೇರಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶಂಕ್ರಯ್ಯ ಸಸಿಮಠ, ಶರಣಬಸಪ್ಪ ಅಳ್ಳೊಳ್ಳಿ, ವಿರುಪಾಕ್ಷಯ್ಯ ತೊಂಡಿಹಾಳ ಮತ್ತು ಡಿ.ಬಿ.ಸುಲಾಖೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ವಿಜಯಕುಮಾರ್ ಮಾತನಾಡಿದರು.
ಶಾಲೆಯ 2003-04 ಮತ್ತು 2004-05ನೇ ಸಾಲಿನ ಹಳೆಯ ವಿದ್ಯಾರ್ಥಿಗಳಾದ ಮಂಜುನಾಥ ಇಳಿಗೇರ, ರಮೇಶ ಪೊಲೀಸ್ ಪಾಟೀಲ್, ಮಹೇಶ ಕವಳಿ, ಯಂಕಪ್ಪ ಹಾದಿಮನಿ, ಫಕೀರಪ್ಪ ಕೊಪ್ಪಳ, ಮಂಜುಳಾ ಸಸಿ, ಮಂಜುಳಾ ತಳವಾರ, ಅನುಪಮಾ ಕುಷ್ಟಗಿ, ಗೀತಾ ಕುಷ್ಟಗಿ ಅವರುಗಳು ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.
ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಗ್ರಾಮದ ಮುಖಂಡರು ಮತ್ತು ಹಳೆಯ ಮತ್ತು ಹೊಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.