ಕೊಪ್ಪಳ | ಮಹಾತ್ಮ ಗಾಂಧಿ ನರೇಗಾ ಯೋಜನೆ ಹೆಸರು ಬದಲಾವಣೆ ಖಂಡಿಸಿ ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ
ಕೊಪ್ಪಳ: ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ಹಾಗೂ ಧ್ವೇಷ ರಾಜಕಾರಣದಿಂದ ನರೇಗಾ ಯೋಜನೆಯಿಂದ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದುಹಾಕಿರುವುದನ್ನು ದೇಶವೇ ವಿರೋಧಿಸಬೇಕು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಆಗ್ರಹಿಸಿದರು.
ನಗರದ ಗಾಂಧಿ ವೃತ್ತದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಯಥಾಸ್ಥಿತಿ ಉಳಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಬಿಜೆಪಿ ಸರ್ಕಾರವು ಗೋಡ್ಸೆ ಹಾಗೂ ಮನುಸ್ಮೃತಿ ಪಾಲಕರ ಪ್ರಭಾವಕ್ಕೆ ಒಳಗಾಗಿ ಮಹಾತ್ಮ ಗಾಂಧಿ ಅವರ ಹೆಸರನ್ನು ಯೋಜನೆಯಿಂದ ತೆಗೆದುಹಾಕಿ, ಯೋಜನೆಯ ರೂಪವನ್ನೇ ಬದಲಾಯಿಸುವ ಮೂಲಕ ರಾಜ್ಯ ಸರ್ಕಾರಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಈ ದುಷ್ಟ ಮನಸ್ಥಿತಿಯನ್ನು ಖಂಡಿಸಿ ಕಪ್ಪು ಪಟ್ಟಿ ಧರಿಸಿ ಗಾಂಧಿ ವೃತ್ತದವರೆಗೆ ಪ್ರತಿಭಟನೆ ನಡೆಸಲಾಗಿದೆ ಎಂದರು. ಕೂಡಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಇದನ್ನು ಜನಾಂದೋಲನವಾಗಿ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಸಚಿವ ಹಾಲಪ್ಪಾಚಾರ ಅವರು ನರೇಗಾ ಯೋಜನೆ ಕುರಿತು ಮಾತನಾಡುವ ಮೊದಲು ತಾವು ಶಾಸಕರಾಗಿದ್ದಾಗ ಮತ್ತು ಸಚಿವರಾಗಿದ್ದಾಗ ನಡೆದ ಭ್ರಷ್ಟಾಚಾರದ ವಿವರಗಳನ್ನು ಜನರಿಗೆ ತಿಳಿಸಬೇಕು ಎಂದು ಜ್ಯೋತಿ ಗೊಂಡಬಾಳ ಪ್ರಶ್ನಿಸಿದರು.
ಮಹಾತ್ಮ ಗಾಂಧಿ ಹೆಸರನ್ನು ತೆಗೆದು ‘ವಿಬಿ ಜಿ ರಾಮ್ ಜಿ’ ಎಂದು ಕರೆಯುತ್ತಿರುವುದು ಶ್ರೀರಾಮನ ಹೆಸರಲ್ಲ, ಕೇವಲ ಸಂಕ್ಷಿಪ್ತ ರೂಪ ಮಾತ್ರ. ಜನರು ಭ್ರಮೆಗೆ ಒಳಗಾಗಬಾರದು ಎಂದು ಎಚ್ಚರಿಸಿದರು.
ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ ಮಾತನಾಡಿ, ಮಹಾತ್ಮ ಗಾಂಧಿ ಕಂಡ ಕನಸು ನನಸಾಗಲು ಗ್ರಾಮೀಣ ಜನರ ಜೀವನ ಸುಧಾರಿಸಬೇಕು. ನರೇಗಾ ಯೋಜನೆ ಮೊದಲಿನಂತೆಯೇ ಇರಬೇಕು. ಹೊಸ ಯೋಜನೆ ಅಧಿಕಾರ ಕೇಂದ್ರೀಕರಣದ ಮೂಲಕ ಗುತ್ತಿಗೆದಾರರು ಹಾಗೂ ದೊಡ್ಡ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡುವ ಷಡ್ಯಂತ್ರವಾಗಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ್–2 ತಹಶೀಲ್ದಾರ ಗವಿಸಿದ್ದಪ್ಪ ಮಣ್ಣೂರ ಅವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಿಶೋರಿ ಬೂದನೂರ, ಆಯೆಷಾ ಖಾನಂ, ಮಂಜುನಾಥ ಗೊಂಡಬಾಳ, ಯಾದವ ರವಿ ಕುರಗೋಡ, ಹೊನ್ನೂರಸಾಬ ಭೈರಾಪೂರ, ಸಲೀಂ ಅಳವಂಡಿ, ಪದ್ಮಾವತಿ ಕಂಬಳಿ, ಸುಮಂಗಲಾ ನಾಯಕ, ಮಲ್ಲಿಕಾರ್ಜುನ ಪೂಜಾರ, ಗಂಗಮ್ಮ ಚಿಕೇನಕೊಪ್ಪ, ಯಶೋಧಾ ಮರಡಿ, ಚನ್ನಮ್ಮ, ಶಿಲ್ಪಾ ಗುಡ್ಲಾನೂರ, ಸಾವಿತ್ರಿ ಗೊಲ್ಲರ, ಶರಣಮ್ಮ ಪೂಜಾರ, ಅಂಜಲಿ, ರೇಖಾ, ಶ್ರೀನಿವಾಸ ಪಂಡಿತ, ಸೈಯದ್ ನಾಸಿರುದ್ದೀನ್, ಮೌನೇಶ ವಡ್ಡಟ್ಟಿ, ಹನುಮೇಶ ಬೆಣ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.