ಕೊಪ್ಪಳ | ದಕ್ಷಿಣ ಭಾರತ ವಿಜ್ಞಾನ ಮೇಳ: ಶಿಕ್ಷಕ ಆನಂದ ಆಶ್ರಿತ್‌ಗೆ ವಿಶೇಷ ಬಹುಮಾನ
ಕೊಪ್ಪಳ: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ವಿಭಾಗದ ಗಣಿತ ಶಿಕ್ಷಕ ಆನಂದ ಆಶ್ರಿತ್ ಅವರು ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ವಿಶೇಷ ಬಹುಮಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಕೊಲ್ಲೂರು ತಾಲೂಕಿನ ಗಾಡಿಯಂ ಶಾಲೆಯಲ್ಲಿ ಜನವರಿ 19ರಿಂದ 23ರವರೆಗೆ ನಡೆದ ದಕ್ಷಿಣ ಭಾರತ ವಿಜ್ಞಾನ ಮೇಳದಲ್ಲಿ ಶಿಕ್ಷಕರ ವಿಭಾಗದಲ್ಲಿ ಅವರು ಭಾಗವಹಿಸಿದ್ದರು. ದಕ್ಷಿಣ ಭಾರತದ ಆರು ರಾಜ್ಯಗಳಿಂದ ಸುಮಾರು 60 ಶಿಕ್ಷಕರು ಈ ಮೇಳದಲ್ಲಿ ಪಾಲ್ಗೊಂಡಿದ್ದರು.
ಗಣಿತ ಶಿಕ್ಷಕರಾದ ಆನಂದ ಆಶ್ರಿತ್ ಅವರು ವೃತ್ತಗಳ ಪರಿಕಲ್ಪನೆಗೆ ಸಂಬಂಧಿಸಿದ ಪ್ರಮೇಯಗಳನ್ನು ಮಾದರಿ ರೂಪದಲ್ಲಿ ತಯಾರಿಸಿ ಪ್ರಸ್ತುತಪಡಿಸಿದ್ದು, ಅವರ ವಿಷಯ ನಿರೂಪಣೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಮೆಚ್ಚಿ ನ್ಯಾಯಾಧೀಶರು ವಿಶೇಷ ಬಹುಮಾನಕ್ಕೆ ಆಯ್ಕೆ ಮಾಡಿದ್ದಾರೆ.
ಈ ಸಾಧನೆಗೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸೋಮಶೇಖರಗೌಡ ಪಾಟೀಲ್, ಡಯಟ್ ಪ್ರಾಚಾರ್ಯರು, ನೋಡಲ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಉಪಪ್ರಾಂಶುಪಾಲ ವೀರಯ್ಯ ಸೂಡಿಮಠ್, ಎಸ್‌ಡಿಎಂಸಿ ಅಧ್ಯಕ್ಷ ಸಂಜೀವಮೂರ್ತಿ ಚೆನ್ನದಾಸರ್, ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.