ಕೊಪ್ಪಳ | 20ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳಿಂದ ದಾಳಿ: ಓರ್ವ ಬಾಲಕನಿಗೆ ಗಂಭೀರ ಗಾಯ
ಕೊಪ್ಪಳ: ಜಿಲ್ಲೆಯ ತಳಕಲ್ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಶನಿವಾರ 20ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಎಲ್ಲಾರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯ ಬಳಿ ಆಟವಾಡುತ್ತಿದ್ದ ಬಾಲಕನ ಮೇಲು ನಾಯಿಗಳು ದಾಳಿ ನಡೆಸಿದ್ದು, ಇದರಿಂದ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ.
ಗಾಯಗೊಂಡ ಬಾಲಕನನ್ನು ಯಮನೂರುಸಾಬ್ ನದಾಫ್ (8) ಎಂದು ತಿಳಿದುಬಂದಿದೆ.
ಆಟವಾಡುತ್ತಿದ್ದ ಬಾಲಕನ ಮೇಲೆ ನಾಯಿಗಳು ಒಮ್ಮೆಲೆ ಆಕ್ರಮಣ ಮಾಡಿದ್ದು, ಬಾಲಕನ ಕಿರಿಚಾಟದಿಂದ ಸ್ಥಳದಲ್ಲಿದ್ದ ಜನರು ನಾಯಿಗಳನ್ನು ಓಡಿಸಿದ್ದಾರೆ. ಇಲ್ಲದಿದ್ದರೆ ನಾಯಿಗಳ ದಾಳಿಗೆ ಮಗು ಬಲಿಯಾಗುತ್ತಿತ್ತು ಎನ್ನಲಾಗುತ್ತಿದೆ.
ಈ ಕುರಿತು ಗ್ರಾಮ ಪಂಚಾಯತ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾಯಿಗಳ ದಾಳಿಗೆ ಬಾಲಕನ ತಲೆ, ಕೆನ್ನೆ ಮೇಲೆ ಗಂಭೀರ ಗಾಯಗಳಾಗಿದೆ.
ಶುಕ್ರವಾರ ಕೂಡ ಗ್ರಾಮದ 10ಕ್ಕೂ ಹೆಚ್ಚು ಜನರ ಮೇಲೆ ಇದೇ ರೀತಿ ನಾಯಿಗಳು ದಾಳಿ ನಡೆಸಿದ್ದವು ಎನ್ನಲಾಗುತ್ತಿದ್ದು, ಶನಿವಾರ ಮತ್ತೆ ಇಂತಹದ್ದೆ ಘಟನೆ ಮರುಕಳಿಸಿದೆ. ಗಾಯಗೊಂಡಿದ್ದ ಎಲ್ಲಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.