ಕೊಪ್ಪಳ | ರಾಷ್ಟ್ರೀಯ ಲೋಕ ಅದಾಲತ್ : 8,058 ಪ್ರಕರಣಗಳ ಪೈಕಿ 6,502 ಪ್ರಕರಣಗಳು ಇತ್ಯರ್ಥ
ಕೊಪ್ಪಳ : ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ನ್ಯಾಯಾಲಯಗಳಲ್ಲಿ ಒಟ್ಟು 8,058 ಪ್ರಕರಣಗಳ ಪೈಕಿ 6,502 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮಹಾಂತೇಶ. ಎಸ್ ದರಗದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ತೆರಿಗೆ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್ ಪ್ರಕರಣಗಳು, ಜನನ ಮರಣ, ಸಿವಿಲ್ ಕೇಸ್, ಕ್ರಿಮಿನಲ್ ಕೇಸ್, ಮೋಟಾರ್ ವಾಹನ ಅಪಘಾತ ಮತ್ತು ಎಂಎಂಆರ್‌ಡಿ ಪ್ರಕರಣಗಳು ಸೇರಿದಂತೆ ಇತರ ಪ್ರಕರಣಗಳಲ್ಲಿ 6,502 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಇದರ ಒಟ್ಟು ಮೌಲ್ಯವು 230,752,110 ರೂ ಅಗಿದ್ದು, ಪೂರ್ವ ದಾವೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 47,057 ಪ್ರಕರಣಗಳ ಪೈಕಿ 42,309 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಈ ಪ್ರಕರಣಗಳ ಒಟ್ಟು ಮೌಲ್ಯ 39,970,466 ಆಗಿದೆ ಎಂದು ಪ್ರಕಟನೆಯಲ್ಲಿ ಹೇಳಿದ್ದಾರೆ.
ಒಂದೇ ದಿನದಲ್ಲಿ ಒಟ್ಟು 55,115 ಪ್ರಕರಣಗಳ ಪೈಕಿ 48,811 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಪ್ರಕರಣಗಳ ಒಟ್ಟು ಮೌಲ್ಯ 270,722,576 ರೂ ಅಗಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸಲಾಗಿದೆ ಎಂದು ಅವರು ನೀಡಿದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಲೋಕ ಅದಾಲತ್ ಮೂಲಕ ಒಂದಾದ ಆರು ಜೋಡಿ :
ಮನಸ್ತಾಪಗೊಂಡು ವಿಚ್ಛೇದನ ಪಡೆಯಲು ಸಿದ್ದರಿದ್ದ ಆರು ಜೋಡಿಗಳು ಮತ್ತೆ ಈ ಲೋಕ ಅದಾಲತ್ ಮೂಲಕ ಒಂದಾಗಿದ್ದಾರೆ.