ಕುಕನೂರು | ರಾಜೂರ ಗ್ರಾಮ ಪಂಚಾಯತ್ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ
ಕುಕನೂರು : ಕುಕನೂರು ತಾಲೂಕು ವ್ಯಾಪ್ತಿಯ ರಾಜೂರ ಗ್ರಾಮ ಪಂಚಾಯಿತಿಯಲ್ಲಿ ಐದು ವರ್ಷಗಳ ಸೇವಾ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರನ್ನು ಪಂಚಾಯತ್ ಸಿಬ್ಬಂದಿ ಹಾಗೂ ಅಭಿವೃದ್ಧಿ ಅಧಿಕಾರಿಗಳು ಸನ್ಮಾನಿಸಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ನನ್ನ ಸೇವಾ ಅವಧಿಯಲ್ಲಿ ಇಂತಹ ಸಹಾನುಭೂತಿ ಮತ್ತು ಸಹಕಾರ ಮನೋಭಾವ ಹೊಂದಿದ ಸದಸ್ಯರೊಂದಿಗೆ ಕಾರ್ಯನಿರ್ವಹಿಸಿರುವುದು ಹೆಮ್ಮೆಯ ಸಂಗತಿ. ಸದಸ್ಯರ ಒಗ್ಗಟ್ಟಿನ ಆಡಳಿತಕ್ಕೆ ಸಾಕ್ಷಿಯಾಗಿ 2024–25ನೇ ಸಾಲಿನಲ್ಲಿ ರಾಜೂರ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಇದು ಪಂಚಾಯತ್‌ಗೆ ಮಾತ್ರವಲ್ಲ, ಗ್ರಾಮಸ್ಥರಿಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ಸದಸ್ಯ ಬಸವರಾಜ್ ರೆಡ್ಡಿ, ಚಿಕ್ಕ ವಯಸ್ಸಿನಲ್ಲಿ ಸದಸ್ಯರಾಗಿ ಬಂದಾಗ ಅನೇಕ ಅಭಿವೃದ್ಧಿ ಕನಸುಗಳನ್ನು ಹೊತ್ತುಕೊಂಡು ಬಂದಿದ್ದೆವು. ವಾಸ್ತವ ಸ್ಥಿತಿಯ ಅರಿವಿನೊಂದಿಗೆ ಶಾಸಕರು ಹಾಗೂ ಅಧಿಕಾರಿಗಳ ಸಹಕಾರದಿಂದ ಸಾಧ್ಯವಾದಷ್ಟು ಗ್ರಾಮಾಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ತೃಪ್ತಿ ಇದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸದಸ್ಯ ಭೀಮರೆಡ್ಡಿ ಮಾದನೂರು ಮಾತನಾಡಿ, ಒಳ್ಳೆಯ ಸದಸ್ಯರ ತಂಡದೊಂದಿಗೆ ಪಂಚಾಯತ್ ಕಾರ್ಯಗಳನ್ನು ಮುನ್ನಡೆಸಿದ ಹೆಮ್ಮೆ ಇದೆ. ಎಲ್ಲ ಸದಸ್ಯರ ಸಹಕಾರ ಮನೋಭಾವದಿಂದಲೇ ಕಾರ್ಯಗಳು ಸುಗಮವಾಗಿ ನಡೆಯಲು ಸಾಧ್ಯವಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಮಾಲಗಿತ್ತಿ, ಉಪಾಧ್ಯಕ್ಷ ಕೋಟೆಪ್ಪ ಗೊಂದಿ, ಸದಸ್ಯರಾದ ವೀರಪ್ಪ ಬಿಡ್ನಾಳ, ವಿಜಯಕುಮಾರ್ ಮಾದನೂರು, ಶಿವನಪ್ಪ ಹೂಗಾರ, ಹುಲ್ಲಮ್ಮ, ರತ್ನಮ್ಮ, ಬುಡ್ಡಮ್ಮ, ಭೀಬಿ ಜಾನ್, ದೇವಮ್ಮ, ಶರಣಮ್ಮ, ಶಾಂತ ಮೂಲಿಮನಿ, ಶೈನಾಜಾ ಬೇಗಂ, ಸಿಬ್ಬಂದಿಗಳಾದ ಬಸವರಾಜ ಹುಬಳ್ಳಿ, ರಾಜಸಾಬ, ದಾವಲಸಾಬ, ನಿಂಗಪ್ಪ ಗೊಂದಿ, ಮಂಗಳೇಶ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.