ಕನಕಗಿರಿ ಹೊರ ವಲಯದಲ್ಲಿ ಚಿರತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ
ಸಾಂದರ್ಭಿಕ ಚಿತ್ರ
ಕನಕಗಿರಿ: ತಾಲೂಕಿನ ಹೊರವಲಯದಲ್ಲಿ ಬುಧವಾರ ರಾತ್ರಿ ಸುಮಾರು 2 ಗಂಟೆಗೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಗುಂಡಪ್ಪ ಧನಕರ ಅವರ ಹೊಲದ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಹೊಲದಲ್ಲಿ ಕಟ್ಟಿದ್ದ ನಾಯಿಯ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಏಕಾಏಕಿ ಚಿರತೆ ಕಾಣಿಸಿಕೊಂಡಿದ್ದರಿಂದ ಹೊಲದಲ್ಲಿ ಮೇಯುತ್ತಿದ್ದ ಜಾನುವಾರುಗಳು ಗಾಬರಿಗೊಂಡು ಚದುರಿ ಓಡಿ ಹೋಗಿವೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಓಡಾಡುತ್ತಿರುವ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದರು. ಇದೀಗ ಚಿರತೆ ನೇರವಾಗಿ ಕಾಣಿಸಿಕೊಂಡಿರುವುದರಿಂದ ರೈತರು ಹಾಗೂ ಸಾರ್ವಜನಿಕರಲ್ಲಿ ಭಯ ಹೆಚ್ಚಾಗಿದೆ.
ಚಿರತೆಯನ್ನು ಕೂಡಲೇ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೋನು ಅಳವಡಿಸಬೇಕು. ಅಲ್ಲದೆ, ರಾತ್ರಿ ವೇಳೆ ರೈತರು ಜಾನುವಾರುಗಳೊಂದಿಗೆ ಹೊಲಗಳಲ್ಲಿ ತಂಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ರಮೇಶ್, ದೊಡ್ಡಪ್ಪ ಕೊಡ್ಲಿ, ಮುದಿಯಪ್ಪ ಧನಕಾಯರ, ಹನುಮೇಶ ಹಾಗೂ ಹೊನ್ನಪ್ಪ ಒತ್ತಾಯಿಸಿದ್ದಾರೆ.