ಜಾತಿ ಗಣತಿ ಸಮೀಕ್ಷೆಗೆ 10 ವರ್ಷಗಳು ಕಳೆದಿರುವುದರಿಂದ ಮರು ಸರ್ವೇ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
ಚಿಕ್ಕಬಳ್ಳಾಪುರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಮರು ಸರ್ವೇ ನನ್ನ ತೀರ್ಮಾನವಲ್ಲ. ಅದು ಪಕ್ಷದ ಹೈಕಮಾಂಡ್ ನಿರ್ಧಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೌರಿಬಿದನೂರು ತಾಲೂಕಿನ ಅಲಕಪುರ ಹೆಲಿಪ್ಯಾಡ್ ನಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ, ಜಾತಿ ಗಣತಿ ನಡೆದಿದ್ದು 2015ರಲ್ಲಿ. ಅದಕ್ಕೆ 10 ವರ್ಷಗಳು ಕಳೆದಿವೆ. ಆದ್ದರಿಂದ ಮರು ಸಮೀಕ್ಷೆ ನಡೆಸುವಂತೆ ಹೈಕಮಾಂಡ್ ನಿರ್ದೇಶನ ನೀಡಿದೆ ಎಂದು ಹೇಳಿದರು.
ಕಾಂತರಾಜು ವರದಿ ಸರಕಾರಕ್ಕೆ ಸಲ್ಲಿಕೆಯಾಗಿದೆ. ಆ ವರದಿಯನ್ನು ಪೂರ್ಣವಾಗಿ ಕಡೆಗಣಿಸಿಲ್ಲ. ಕೆಲವು ಬದಲಾವಣೆಗಳೊಂದಿಗೆ 60ರಿಂದ 70 ದಿನಗಳಲ್ಲಿ ಮರು ಸರ್ವೇ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಈ.ಡಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಕಾನೂನಿನ ಅನುಷ್ಠಾನಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಆದರೆ ಬಿಜೆಪಿ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.