ಮಂಡ್ಯದ ಇಬ್ಬರಿಗೆ ಮಂತ್ರಿ ಗಿರಿ; ಎನ್.ಚಲುವರಾಯಸ್ವಾಮಿ, ನರೇಂದ್ರಸ್ವಾಮಿಗೆ ಅವಕಾಶ
ಮಂಡ್ಯ : ನಿರೀಕ್ಷೆಯಂತೆ ಜಿಲ್ಲೆಯ ಕಾಂಗ್ರೆಸ್ ನ ಹಿರಿಯ ಶಾಸಕರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ದೊರಕಿದೆ. ಮತ್ತೊಬ್ಬ ಪ್ರಬಲ ಆಕಾಂಕ್ಷಿಯಾದ ಶ್ರೀರಂಗಪಟ್ಟಣದ ಹಿರಿಯ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರಿಗೆ ನಿರಾಶೆ ಉಂಟಾಗಿದೆ. ಇದರೊಂದಿಗೆ ಸಚಿವ ಸ್ಥಾನದ ಪಟ್ಟ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಜಿಲ್ಲೆಯಲ್ಲಿ ಜಾತಿ ಲೆಕ್ಕಾಚಾರ ಮತ್ತು ಹಿರಿತನದ ಕಾರಣಕ್ಕೆ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಅವಕಾಶ ಪಡೆದಿದ್ದಾರೆ. ಕಾಂಗ್ರೆಸ್ ಬೆಂಬಲಿತ ರೈತ ಸಂಘದ ಮೇಲುಕೋಟೆಯ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕಾಂಗ್ರೆಸ್‌ನ ಮದ್ದೂರಿನ ಕೆ.ಎಂ.ಉದಯ ಹಾಗೂ ಮಂಡ್ಯದ ರವಿಕುಮಾರ್ ಗಣಿಗ, ಈ ಮೂವರೂ ಹೊಸದಾಗಿ ವಿಧಾನಸಭೆ ಪ್ರವೇಶಿಸಿದವರು. ಇವರು ತಾವು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದರು.
ಚಲುವರಾಯಸ್ವಾಮಿ ಈಗಾಗಲೇ ಹಲವಾರು ಖಾತೆ ಗಳನ್ನು ಸಮರ್ಥವಾಗಿ ನಿರ್ವಹಿಸಿ ಹೈಕಮಾಂಡ್ ಮಟ್ಟದಲ್ಲೂ ಪಕ್ಷದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಪಕ್ಷದ ಪ್ರಭಾವಿ ಮುಂದಾಳುವಾಗಿದ್ದಾರೆ. ನರೇಂದ್ರಸ್ವಾಮಿ ಮೂರು ಬಾರಿ ಗೆದ್ದು ಒಮ್ಮೆ ಸಚಿವರಾಗಿದ್ದರು. ಜಿಲ್ಲೆಯಲ್ಲಿ ಕಾಂಗ್ರೆಸ್‌ನ ದಲಿತ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ.
ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದ ಕೃಷಿಕ ಕುಟುಂಬದ ಹಿನ್ನೆಲೆ ಹೊಂದಿರುವ ಚಲುವರಾಯಸ್ವಾಮಿ, ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಮಾಡಿದ್ದಾರೆ. 1994ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆ ಆಗುವ ಮೂಲಕ ಜಾತ್ಯತೀತ ದಳದಿಂದ ರಾಜಕೀಯ ಪ್ರವೇಶ ಪಡೆದರು. 1999, 2004, 2013 ಹಾಗೂ 2023ರಲ್ಲಿ ನಾಗಮಂಗಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2009ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದ ಅವರು, 2013ರಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾದ ಕಾರಣ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಬದಲಾದ ರಾಜಕೀಯ ಹಿನ್ನೆಲೆಯಲ್ಲಿ ಇವರು ಜಾತ್ಯತೀತ ದಳವನ್ನು ತೊರೆದು 2018ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.
ಬಿ.ಇ. (ಸಿವಿಲ್) ಪದವೀಧರ ಪಿ.ಎಂ.ನರೇಂದ್ರಸ್ವಾಮಿ ಆರಂಭದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರಾಗಿ 2008ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಮಳವಳ್ಳಿ ಮೀಸಲು ಕ್ಷೇತ್ರದಿಂದ ಶಾಸಕರಾಗಿ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದರು. ಮತ್ತೆ ತವರು ಪಕ್ಷ ಕಾಂಗ್ರೆಸ್ ಗೆ ಬಂದು 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದರು. 2018ರಲ್ಲಿ ಸೋಲು ಕಂಡು, 2023ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅತ್ಯಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಇವರಿಗೆ ಸಿದ್ದರಾಮಯ್ಯ ಸರಕಾರ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು.