Mandya | ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಾಣ: ಪೊಲೀಸರಿಂದ ನೆಲಸಮ; ಆರೋಪ
ಮಂಡ್ಯ : ಆಶ್ರಯ ಯೋಜನೆಯಲ್ಲಿ ಮಂಜೂರಾಗಿದ್ದ ನಿವೇಶನದಲ್ಲಿ ನಿರ್ಮಾಣ ಮಾಡುತ್ತಿದ್ದ ಮನೆಗಳನ್ನು ಪೊಲೀಸರು ಯಾವುದೇ ನೋಟಿಸ್ ನೀಡದೆ ನೆಲಸಮಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬುಧವಾರ ಪೊಲೀಸ್ ರಕ್ಷಣೆಯಲ್ಲಿ ಜೆಸಿಬಿ ಮೂಲಕ ನೆಲಸಮಗೊಳಿಸಿದ ಘಟನೆ ಶ್ರೀರಂಗಪಟ್ಟಣ ತಾಲೂಕು ಮೊಗರಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿರುವುದಾಗಿ ವರದಿಯಾಗಿದೆ.
ಸದರಿ ಸ್ಥಳದಲ್ಲಿ ಸರಕಾವೇ ಬಡವರಿಗೆ ಮಂಜೂರು ಮಾಡಿದ್ದ ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿರುವುದನ್ನು ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ ನೆಲಸಮಗೊಳಿಸಲಾಗಿದೆ ಎಂದು ನಿವೇಶನದ ಹಕ್ಕುದಾರರು ಆರೋಪಿಸಿದ್ದಾರೆ.
ಮನೆಗಳನ್ನು ನೆಲಸಮಗೊಳಿಸುವುದನ್ನು ಬಡಾವಣೆಯ ನಿವಾಸಿಗಳು ಮತ್ತು ನಿವೇಶನ ಹಕ್ಕುದಾರರು ವಿರೋಧಿಸಿದರೂ ಪೊಲೀಸರು ಅವರನ್ನು ಬಲವಂತವಾಗಿ ಹೊರದಬ್ಬಿದ್ದಾರೆ ಎನ್ನಲಾಗಿದೆ.
1994ರಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ 11 ಎಕರೆ 30ಗುಂಟೆ ಪ್ರದೇಶದಲ್ಲಿ ಸುಮಾರು 202 ಕುಟುಂಬಗಳಿಗೆ ತಾಲೂಕು ಆಡಳಿತವು ನಿವೇಶನ ಹಕ್ಕುಪತ್ರ ನೀಡಿದೆ. ಇಲ್ಲಿನ ಶೇ.90 ಕುಟುಂಬಗಳು ಭೋವಿ ಜನಾಂಗಕ್ಕೆ ಸೇರಿದವರು. ಹಲವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಉಳಿದವರು ನಿರ್ಮಿಸಿಕೊಳ್ಳುತ್ತಿದ್ದ ಮನೆಗಳನ್ನು ಪೊಲೀಸರ ರಕ್ಷಣೆಯಲ್ಲಿ ನೆಲಸಮಗೊಳಿಸಲಾಗಿದೆ. ಈ ಪ್ರದೇಶ ಕೆಐಡಿಬಿಎಗೆ ಸೇರಿದೆ. ಇಲ್ಲಿ ಮನೆಗಳನ್ನು ನಿರ್ಮಿಸುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಸಂಬಂಧ ಯಾವುದೇ ನೋಟಿಸ್ ಬಂದಿಲ್ಲ.
-ಜಾನ್ ಹೆನ್ರಿ, ಗ್ರಾಪಂ ಮಾಜಿ ಸದಸ್ಯ