×
Ad

ಮಂಡ್ಯ: ನಾಪತ್ತೆಯಾಗಿದ್ದ ಶಿಕ್ಷಕಿಯ ಮೃತದೇಹ ಪತ್ತೆ

Update: 2024-01-23 13:24 IST

ಮಂಡ್ಯ : ನಾಪತ್ತೆಯಾಗಿದ್ದ ಶಾಲಾ ಶಿಕ್ಷಕಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಪಾಂಡವಪುರ ತಾಲೂಕು ಮೇಲುಕೋಟೆಯಲ್ಲಿ ನಡೆದಿದೆ.

ಮೃತ ಶಿಕ್ಷಕಿಯನ್ನು ಪಾಂಡವಪುರ ತಾಲೂಕು ಮಾಣಿಕ್ಕನಹಳ್ಳಿಯ ಲೋಕೇಶ್ ಎಂಬವರ ಪತ್ನಿ ದೀಪಿಕಾ(26) ಎಂದು ಗುರುತಿಸಲಾಗಿದೆ. ಇಬ್ಬರು ದುಷ್ಕರ್ಮಿಗಳು ಹಲ್ಲೆ ಮಾಡುತ್ತಿರುವ ವಿಡಿಯೊ ಪೊಲೀಸರಿಗೆ ದೊರಕಿದ್ದು, ಆರೋಪಿಗಳು ಮೃತದೇಹವನ್ನು ಯೋಗಾನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಹೂತು ಹಾಕಿದ್ದರು.

'ಕೊಲೆಗೆ ಕಾರಣ ಗೊತ್ತಾಗಿಲ್ಲ. ಇಬ್ಬರು ಕಿಡಿಗೇಡಿಗಳು ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಪ್ರವಾಸಿಗರೊಬ್ಬರು ಚಿತ್ರೀಕರಿಸಿ ಕಳುಹಿಸಿದ್ದಾರೆ. ದೃಶ್ಯ 10 ಸೆಕೆಂಡ್ ಇದ್ದು ಸಾಕಷ್ಟು ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ಕೊಲೆಗಾರರನ್ನು ಬಂಧಿಸಲಾಗುವುದು' ಎಂದು ಪೊಲೀಸರು ತಿಳಿಸಿದ್ದಾರೆ.

ಜ.20ರಂದು ಶಿಕ್ಷಕಿ ದೀಪಿಕಾ ಅವರು ನಾಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ಮೇಲಿಕೋಟೆ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಮೇಲುಕೋಟೆ ಪೊಲೀಸರಿಗೆ ಬೆಟ್ಟದ ತಪ್ಪಲಲ್ಲಿ ಅವರ ಸ್ಕೂಟರ್ ಪತ್ತೆಯಾಗಿತ್ತು. ನಂತರ, ಅವರನ್ನು ಕೊಲೆ ಮಾಡಿ ಗುಂಡಿ ತೆಗೆದು ಹೂತಿರುವುದು ಬೆಳಕಿಗೆ ಬಂದಿದ್ದು, ಮೃತದೇಹವನ್ನು ಹೊರತೆಗೆದು ಶವಪರೀಕ್ಷೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪ ವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ಶ್ರೇಯಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News