Mandya | ಸತತ ನಾಲ್ಕು ದಿನಗಳ ಕಾರ್ಯಾಚರಣೆ ಯಶಸ್ವಿ; ನಾಲೆಗೆ ಬಿದ್ದಿದ್ದ ಆನೆಯ ರಕ್ಷಣೆ
ಮಳವಳ್ಳಿ(ಮಂಡ್ಯ ಜಿಲ್ಲೆ) : ಮಳವಳ್ಳಿ ತಾಲೂಕಿನ ಶಿವನಸಮುದ್ರದ ಬಳಿ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ 70 ಅಡಿ ಆಳದ ಕಾವೇರಿ ನದಿಯ ನಾಲೆಯಲ್ಲಿ ಸಿಲುಕಿದ್ದ ಕಾಡಾನೆಯನ್ನು ಸತತ ನಾಲ್ಕು ದಿನಗಳ ಕಾರ್ಯಾಚರಣೆ ಬಳಿಕ ಮಂಗಳವಾರ ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ.
ಕಳೆದ ಶನಿವಾರ ಈ ಆನೆ ನೀರು ಕುಡಿಯಲು ಕಾವೇರಿ ನದಿಗೆ ಇಳಿದಾಗ ನೀರಿನ ರಭಸಕ್ಕೆ ಕೆನಾಲ್ ಒಳಗೆ ಸಿಲುಕಿಕೊಂಡಿತ್ತು ಆನೆ ಬಂದ ದಾರಿಯಲ್ಲೆ ವಾಪಸ್ ಆಗಬಹುದು ಅಂತ ಒಂದು ದಿನ ಕಾದ, ವಿದ್ಯುತ್ ಉತ್ಪಾದನಾ ಕೇಂದ್ರದ ಸಿಬ್ಬಂದಿ ಆನೆ ವಾಪಸ್ ತೆರಳದಿದ್ದಾಗ, ರವಿವಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ರವಿವಾರವಾರವೂ ಆನೆ ವಾಪಸ್ ಬರದ ಕಾರಣ ಅಧಿಕಾರಿ ಸಿಬ್ಬಂದಿ ಸೋಮವಾರ ಸಂಜೆವರೆಗೂ ಕಾರ್ಯಾಚರಣೆ ನಡೆಸಿದರು. ಸ್ಥಳೀಯ ಮಟ್ಟದ ಕ್ರೇನ್ ಬಳಸಿ ಆನೆ ಮೇಲೆತ್ತಲು ಪ್ರಯತ್ನಿಸಿದ್ದರು. ಆದರೆ, ವಿಫಲವಾಗಿತ್ತು. ಕತ್ತಲಾದ ಹಿನ್ನೆಲೆ ಮಂಗಳವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದರು. ಬೆಂಗಳೂರಿನಿಂದ ಹೈಡ್ರಾಲಿಕ್ ಕ್ರೇನ್ ತರಿಸಿ, ಕಂಟೇನರ್ ಸಹಾಯದ ಮೂಲಕ ಅನೆ ಮೇಲೆತ್ತಲು ಪ್ಲಾನ್ ರೂಪಿಸಿದರು. ಅದರಂತೆ ಪಶು ವೈದ್ಯ ರಮೇಶ್ ಹಾಗೂ ವೈದ್ಯ ಆದರ್ಶ್ ಜಂಟಿ ಕಾರ್ಯಾಚರಣೆಯಲ್ಲಿ ಆನೆಗೆ ಅರವಳಿಕೆ ಚುಚ್ಚು ಮದ್ದು ನೀಡಲಾಯಿತು. ಎರಡನೇ ಚುಚ್ಚು ಮದ್ದಿಗೆ ಕೆಳಕ್ಕುರುಳಿದ ಆನೆಯನ್ನು ಕಂಟೇನರ್ ನಲ್ಲಿ ಇರಿಸಿ ಮೇಲೆತ್ತಲಾಯ್ತು.
ನಾಲ್ಕು ದಿನಗಳ ಕಾಲ ನೀರಿನಲ್ಲಿದ್ದ ಆನೆಗೆ ಸೊಂಡಿಲು ಹಾಗೂ ಕಾಲುಗಳಲ್ಲಿ ಸೋಂಕು ತಗುಲಿದ್ದ ಕಾರಣ ಅರಿಶಿನ ಹಾಗೂ ನೀಲಗಿರಿ ತೈಲದ ಲೇಪನ ಮಾಡಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ, ಆನೆಗೆ ಸಹಜ ಸ್ಥಿತಿಗೆ ಬರುವಂತೆ ಚುಚ್ಚುಮದ್ದು ನೀಡಿ ನಂತರ, ಧನಗೂರು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
"ಆನೆ ನಿರಂತರ ನೀರಲ್ಲಿದ್ದ ಹಿನ್ನೆಲೆ ಸೊಂಡಿಲು, ಕಾಲುಗಳು ಬಿಳಿ ಬಣ್ಣಕ್ಕೆ ತಿರುಗಿತ್ತು. ಬಿಸಿಲಿನಲ್ಲಿ ಆನೆ ಓಡಾಡುತ್ತಿದ್ದಂತೆ ಮತ್ತೆ ಯಥಾಸ್ಥಿತಿಗೆ ಬರಲಿದೆ. ಅದನ್ನು ಹೊರತುಪಡಿಸಿ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕೆಲದಿನಗಳ ಕಾಲ ಆನೆಯನ್ನು ಡ್ರೋನ್ ಮೂಲಕ ಮಾನಿಟರ್ ಮಾಡಲಾಗುತ್ತದೆ"
- ಡಾ.ಪ್ರಭು, ಡಿಸಿಎಫ್.