ಮಂಡ್ಯ | ಕಾಲುವೆಗೆ ಬಿದ್ದ ಕಾರು: ಚಾಲಕ ಪ್ರಾಣಾಪಾಯದಿಂದ ಪಾರು
ಮಂಡ್ಯ : ತುಂಬಿ ಹರಿಯುತ್ತಿದ್ದ ಕಾಲುವೆಗೆ ಕಾರು ಬಿದ್ದಿದ್ದು, ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಬಿ.ಯರಹಳ್ಳಿ ಸಮೀಪ ಸೋಮವಾರ ಬೆಳಗಿನ ಜಾವ ನಡೆದಿದೆ.
ಕಾರು ಚಲಾಯಿಸುತ್ತಿದ್ದ ಮಂಡ್ಯದ ಕಲ್ಲಹಳ್ಳಿ ಬಡಾವಣೆ ನಿವಾಸಿ ಕೃಷ್ಣ ಎಂಬುವರು ಕಾರಿನಿಂದ ಹೊರ ಬಂದು ಈಜಿ ದಡೆ ಸೇರಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕೃಷ್ಣ ಅವರು ಕಾರ್ಯನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದಾಗ ವಿಶ್ವೇಶ್ವರಯ್ಯ ನಾಲೆ ಬಳಿ ತಿರುವಿನಲ್ಲಿ, ನಿಯಂತ್ರಣ ತಪ್ಪಿದ ಕಾರು ನಾಲೆಗೆ ಉರುಳಿ ಬಿದ್ದಿದೆ. ಆದರೆ, ಕೃಷ್ಣ ಅವರು ಸಮಯ ಪ್ರಜ್ಞೆಯಿಂದ ತಕ್ಷಣ ಕಾರಿನ ಬಾಗಿಲು ತೆಗೆದು ಹೊರಬಂದಿದ್ದಾರೆ.
ಸ್ಥಳೀಯರು ಹಾಗೂ ಕೃಷ್ಣನಿಂದ ಮಾಹಿತಿ ಪಡೆದ ಪೊಲೀಸರು, ಅಗ್ನಿಶಾಮಿಕ ಸಿಬ್ಬಂದಿಯ ಜೊತೆ ಸ್ಥಳಕ್ಕೆ ಆಗಮಿಸಿದ ಕ್ರೇನ್ ಮೂಲಕ ನೀರಿನಲ್ಲಿ ಮುಳುಗಿದ್ದ ಕಾರನ್ನು ಹೊರ ತೆಗೆದರು.
ಕಾಲುವೆ ರಸ್ತೆ ಕಿರಿದಾಗಿದ್ದು, ತಿರುವುಗಳಿವೆ. ಬೆಳಗಿನ ಜಾವ ಸುಮಾರು ನಾಲ್ಕು ಮೂವತ್ತರ ಸಮಯದಲ್ಲಿ ಕಾರಿನ್ನು ಚಲಾಯಿಸುತ್ತಿದ್ದಾಗ, ದಟ್ಟ ಮಂಜು ಕವಿದಿದ್ದರಿಂದ ದಾರಿ ಸರಿಯಾಗಿ ಕಾಣದೆ ಕಾರು ನಾಲೆಗೆ ಬಿದ್ದಿತು. ಬಾಗಿಲನ್ನು ತೆಗೆದು ಹೊರಬಂದು ಬದುಕಿಕೊಂಡೆ ಎಂದು ಕೃಷ್ಣ ಹೇಳಿದರು.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಳೆಯ ತಿರುವುಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಿಲ್ಲದಿರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಶಾಸಕರು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.