×
Ad

ಮಂಡ್ಯ | ಡಿಸಿ ಕಚೇರಿ ಎದುರು ಬೆಂಕಿ ಹಚ್ಚಿಕೊಂಡು ರೈತ ಆತ್ಮಹತ್ಯೆಗೆ ಯತ್ನ

Update: 2025-11-04 19:16 IST

ಮಂಡ್ಯ : ಭೂ ಪರಿಹಾರ ದೊರೆತಿಲ್ಲವೆಂದು ಬೇಸತ್ತು ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿ ಮಂಗಳವಾರ ಬೆಳಗ್ಗೆ ರೈತನೊಬ್ಬ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.

ಕೆ.ಆರ್.ಪೇಟೆ ತಾಲೂಕು ಮೂಡನಹಳ್ಳಿ ಗ್ರಾಮದ ಮಂಜೇಗೌಡ(55) ಆತ್ಮಹತ್ಯೆಗೆ ಯತ್ನಿಸಿದ ರೈತನಾಗಿದ್ದು, ಶೇ.50ರಷ್ಟು ದೇಹ ಸುಟ್ಟುಹೋಗಿದೆ. ಮಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಗ್ರಾಮದಲ್ಲಿ ಮಂಜೇಗೌಡನ ಕುಟುಂಬಕ್ಕೆ ಸೇರಿದ ಎರಡು ಎಕರೆ ಜಮೀನಿದ್ದು, ಕೆಲ ವರ್ಷಗಳ ಹಿಂದೆಯೇ ಅದನ್ನು ಸರಕಾರ ವಶಪಡಿಸಿಕೊಂಡು ನಿವೇಶನ ಮಾಡಿ ಬಡವರಿಗೆ ಹಂಚಿಕೆ ಮಾಡಿದೆ. ಆದರೆ, ಇದಕ್ಕೆ ಪ್ರತಿಯಾಗಿ ತಮಗೆ ಯಾವುದೇ ಪರಿಹಾರ ಬಂದಿಲ್ಲ ಎಂಬುದು ಮಂಜೇಗೌಡರ ಆರೋಪ.

ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಕೆ.ಅರ್.ಪೇಟೆ ತಾಲೂಕು ಕಚೇರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಸೋಮವಾರ ಜಿಲ್ಲಾಧಿಕಾರಿಗೆ ಮತ್ತೆ ಮನವಿ ಸಲ್ಲಿಸಲು ಬಂದಿದ್ದು, ಸಾಧ್ಯವಾಗದೆ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನವನದಲ್ಲಿ ಮಲಗಿದ್ದರು ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ ಉದ್ಯಾನವನದಲ್ಲೇ ಮಂಜೇಗೌಡ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಮಿಮ್ಸ್ ಜಿಲ್ಲಾಸ್ಪತ್ರೆಗೆ ವೈದ್ಯರ ಶಿಫಾರಸ್ಸಿನ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ತನಿಖೆಗೆ ಸೂಚಿಸಿದ್ದೇನೆ: ಜಿಲ್ಲಾಧಿಕಾರಿ ಕುಮಾರ

ಕೆ.ಆರ್.ಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಕೋರಿ ಮಂಜೇಗೌಡ ಸಲ್ಲಿಸಿರುವ ಯಾವುದೇ ಅರ್ಜಿ ಬಾಕಿ ಉಳಿದಿಲ್ಲ. ಅಪ್ಪ-ಮಗನ ಜಗಳ ಮತ್ತು ಬ್ಯಾಂಕ್‍ನಲ್ಲಿ ಸಾಲ ಮಾಡಿದ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದ್ದಾರೆ.

ತನಿಖೆ ಮಾಡಲು ಹೆಚ್ಚುವರಿ ಜಿಲ್ಲಾಧಿಕಾರಿಗೆ ಸೂಚಿಸಿದ್ದು, ಅವರು ಈಗಾಗಲೇ ಮಾಹಿತಿ ಸಂಗ್ರಹಿಸಿದ್ದಾರೆ. ಕುಟುಂಬ ಸದಸ್ಯರಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ತನಿಖೆ ಪೂರ್ಣಗೊಂಡ ನಂತರ ನಿಜವಾದ ಕಾರಣ ಏನು ಎಂಬುದು ಗೊತ್ತಾಗಲಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News