ಶ್ರೀರಂಗಪಟ್ಟಣ | ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ: ಜಾಮಿಯಾ ಮಸೀದಿಗೆ ನುಗ್ಗಲು ಯತ್ನ; ಪೊಲೀಸರ ನಡುವೆ ಚಕಮಕಿ
ಮಂಡ್ಯ : ಸಂಘಪರಿವಾರವು ಬುಧವಾರ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ, ಕೆಲವರು ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದ ಪರಿಣಾಮ ಸ್ವಲ್ಪ ಸಮಯ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿತ್ತು.
ಪಟ್ಟಣದ ಐತಿಹಾಸಿಕ ಜಾಮಿಯಾ ಮಸೀದಿಯನ್ನೇ ಗುರಿಯಾಗಿಸಿಕೊಂಡು ಪ್ರತಿವರ್ಷ ನಡೆಸುತ್ತಿರುವ ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಭಾರೀ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರ ನಡುವೆಯೂ ಮಸೀದಿಗೆ ನುಗ್ಗುವ ಯತ್ನ ನಡೆದು, ಸ್ವಲ್ಪಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ನೂರಾರು ಮಂದಿ ಹನುಮ ಮಾಲಾಧಾರಿಗಳು ಯಾತ್ರೆಯಲ್ಲಿ ಭಾಗವಹಿಸಿದ್ದರು. ಯಾತ್ರೆ ಮಸೀದಿ ಬಳಿ ಬಂದಾಗ, ಕೇಸರಿ ಬಾವುಟ ಬೀಸುತ್ತಾ ಜೈ ಹನುಮಾನ್, ಜೈ ಬಜರಂಗಬಲಿ, ಜೈ ಶ್ರೀರಾಮ್.., ಘೋಷಣೆ ಕೂಗಿದರು.
ಈ ಸಂದರ್ಭ ಕೆಲವರು ಬಿಗಿ ಬ್ಯಾರಿಕೇಡ್ ಬೇಧಿಸಿಕೊಂಡು ಮಸೀದಿ ಅಂಗಳಕ್ಕೆ ಜಿಗಿಯಲು ಯತ್ನಿಸಿದರು. ಈ ಸಂದರ್ಭ ಪೊಲೀಸರು ಮತ್ತು ಯಾತ್ರಿಗಳ ನಡುವೆ ಮಾತಿನ ಚಕಮಕಿ ನಡೆದು ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಪೊಲೀಸರು ತಾಳ್ಮೆಯಿಂದಲೇ ಪರಿಸ್ಥಿತಿಯನ್ನು ನಿಯಂತ್ರಿಸಿ, ಯಾತ್ರೆ ಮುಂದೆ ಸಾಗುವಂತೆ ಮಾಡಿದರು.
ಮತ್ತೆ ಕೆಲವರು, ಅಲ್ಲಿಯೇ ಕುಳಿತು ಭಜನೆ ಮಾಡುತ್ತಿರುವುದು ಕಂಡುಬಂದಿತು. ಇದಕ್ಕೂ ಮುನ್ನ ಪಟ್ಟಣದ ಹೊರವಲಯದ ಗಂಜಾಂನ ಕಾವೇರಿ ನದಿ ದಂಡೆಯಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಆರಂಭವಾದ ಯಾತ್ರೆ ಪಟ್ಟಣದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯದವರೆಗೂ ನಡೆಯಿತು.
ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಪ್ರತಿಯೊಂದು ಚಟುವಟಿಕೆಯ ದೃಶ್ಯ ಸೆರೆಗೆ ಡ್ರೋನ್ ವ್ಯವಸ್ಥೆ ಮಾಡಲಾಗಿತ್ತು. ಮಾರ್ಗದ ಗಂಜಾಂನಲ್ಲಿರುವ ಹಝರತ್ ಸೈಯದ್ ಝಹೋರ್ ಷಾವಲಿ ದರ್ಗಾದ ಬಳಿಯೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.
ಹಿಂದೂ ಜಾಗರಣ ವೇದಿಕೆಯ ಮುಖಂಡ ವಕೀಲ ಬಾಲರಾಜ್ ಹನುಮ ಮಾಲಾಧಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ಭಾನುಪ್ರಕಾಶ್ ಶರ್ಮಾ, ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಚಂದನ್, ಅರ್ಚಕ ಕೃಷ್ಣಭಟ್ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಭದ್ರತೆಯ ನೇತೃತ್ವವಹಿಸಿದ್ದರು. ಸುಮಾರು 1,800 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಭದ್ರತೆ ನಿಯೋಜಿಸಲಾಗಿತ್ತು.