ಮಂಡ್ಯ | ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನೆ: ರಸ್ತೆ ತಡೆ ನಡೆಸಿದ ರೈತರ ಬಂಧನ
Mandya | Protest against release of water to Tamil Nadu: Farmers who blocked road arrested
ಮಂಡ್ಯ, ಆ.22: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ತಾಲೂಕಿನ ಇಂಡುವಾಳು ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ ರೈತರನ್ನು ಪೊಲೀಸರು ಬಂಧಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ( ಮೂಲ ಸಂಘಟನೆ)ದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮಂಜೇಶ್ ಗೌಡ, ಸೊ.ಶಿ. ಪ್ರಕಾಶ್, ಬನ್ನೂರು ನಾರಾಯಣ, ಸಿದ್ದೇಗೌಡ, ಇ.ಬಸವರಾಜ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಮೇಶ್ ಗೌಡ ಸೇರಿ ನೂರಾರು ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಶಾಲಾ ಆವರಣದಿಂದ ಮೆರವಣಿಗೆ ಹೊರಟು ಸರ್ವಿಸ್ ರಸ್ತೆಯಲ್ಲಿ ಸಾಗಿದರು. ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಬಳಿಕ ಪ್ರತಿಭಟನಾಕಾರರು ಎಕ್ಸ್‌ಪ್ರೆಸ್ ಹೈವೆಗೆ ನುಗ್ಗಲು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾನಿರತ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಪರಸ್ಪರ ತಳ್ಳಾಟ- ನೂಕಾಟ ಉಂಟಾಯಿತು. ಬಳಿಕ ಪೊಲೀಸರು ಪ್ರತಿಭಟನಾನಿರತ ರೈತರನ್ನು ಬಲ ಪ್ರಯೋಗಿಸಿ ಬಂಧಿಸಿದರು.
ರೈತರ ಪರ ಸಂಸತ್ತಿನಲ್ಲಿ ದನಿ ಎತ್ತಬೇಕಾದ ಸಂಸದೆ ಸುಮಲತಾ ಅಂಬರೀಶ್ ಬೀದಿಗಿಳಿದು ಹೋರಾಟ ಮಾಡುವ ಮೂಲಕ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದವರು ಬೀದಿಗಿಳಿದು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರೆ, ರಾಜ್ಯದ ಕಾಂಗ್ರೆಸ್ ಸರಕಾರ ನೀರನ್ನೆಲ್ಲಾ ತಮಿಳುನಾಡಿಗೆ ಹರಿಸಿ ಇದೀಗ ಸರ್ವ ಪಕ್ಷ ಸಭೆ ಕರೆದು ರೈತರ ಪರ ಮೊಸಳೆ ಕಣ್ಣೀರು ಸುರಿಸಲು ಮುಂದಾಗಿದೆ ಎಂದು ಕಿಡಿಕಾರಿದರು.
ಕಾವೇರಿ ಕಣಿವೆ ಜಲಾಶಯಗಳಿಂದ ನೀರು ಬಿಡುವ ಮುನ್ನ ಎಚ್ಚೆತ್ತುಕೊಂಡು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಮುಂದಾಗದೆ, ಏಕಾಏಕಿ ನೀರು ಬಿಟ್ಟು, ಜಲಾಶಯಗಳನ್ನು ಬರಿದು ಮಾಡಿ, ಕುಡಿಯುವ ನೀರಿಗೂ ತತ್ವಾರ ತಂದು ಇದೀಗ ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸಕ್ಕೆ ಮುಂದಾಗಿದೆ ಎಂದು ಅವರು ದೂರಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು.