ಮಂಡ್ಯ: ಹತಾಶ ಅವಿವಾಹಿತ ಯುವಕರಿಂದ ಮಠಕ್ಕಾಗಿ ಗ್ರಾ.ಪಂ.ಗೆ ಬೇಡಿಕೆ!
ಮಂಡ್ಯ: ಮುದುವೆಗೆ ಹೆಣ್ಣು ಸಿಗದೆ ಹತಾಶರಾದ ಯುವಕರ ತಂಡವೊಂದು ಮಠ ಕಟ್ಟಿಕೊಂಡು ಜೀವನ ಕಳೆಯಲು ತೀರ್ಮಾನಿಸಿದ್ದು, ಮಠ ನಿರ್ಮಾಣಕ್ಕೆ ಗ್ರಾಮ ಪಂಚಾಯತ್‍ಗೆ ಬೇಡಿಕೆ ಇಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ನಡೆದ ಮದ್ದೂರು ತಾಲೂಕಿನ ಮರಳಿಗ ಗ್ರಾಮ ಪಂಚಾಯತ್‍ನ ಗ್ರಾಮಸಭೆಯಲ್ಲಿ 30 ಯುವಕರ ತಂಡ, ಪಂಚಾಯತ್ ವತಿಯಿಂದ ತಮಗೆ ಮಠ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಸಲ್ಲಿಸುವ ಮೂಲಕ ಆಶ್ಚರ್ಯ ಮೂಡಿಸಿದರು.
ಸಾರ್ವಜನಿಕರು ಗ್ರಾಮಸಭೆಯಲ್ಲಿ ಸಮಸ್ಯೆಗಳನ್ನು ಮಂಡಿಸುತ್ತಿರುವಾಗ ಪ್ರತ್ಯಕ್ಷರಾದ ಯುವಕರು, ಎಷ್ಟೇ ಪ್ರಯತ್ನಪಟ್ಟರೂ ತಮಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಜೀವನ ಬೇಸರ ತಂದಿದೆ. ಮಠವೊಂದನ್ನು ಕಟ್ಟಿಸಿಕೊಡಿ ದೇವರ ಭಜನೆ ಮಾಡಿಕೊಂಡು ಜೀವನ ಕಳೆಯುತ್ತೇವೆಂದು ಸಹಿ ಮಾಡಿದ ಮನವಿ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಿದರು.
ಯುವಕರ ವಿಚಿತ್ರ ಬೇಡಿಕೆಗೆ ದಂಗಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಯುವಕರ ಹತಾಷೆಗೆ ಮರುಕಪಟ್ಟರು ಎಂದು ವರದಿಯಾಗಿದೆ.
ಮುದುವೆಗೆ ಹೆಣ್ಣು ಸಿಗದೆ ಹತಾಶರಾದ ಜಿಲ್ಲೆಯ ಯುವಕರ ತಂಡವು ತಮಗೆ ವಧು ದೊರಕಿಸಿಕೊಡುವಂತೆ ವರ್ಷದ ಹಿಂದೆ ಕೆ.ಎಂ.ದೊಡ್ಡಿಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡು ಗಮನ ಸೆಳೆದಿದ್ದರು.