ಮಂಡ್ಯ | ಖಾಸಗಿ ಬಸ್ ಉರುಳಿ ಬಿದ್ದು 30 ಮಂದಿಗೆ ಗಾಯ
ಮಂಡ್ಯ : ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಸುಮಾರು 30 ಮಂದಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕು ಅಗರಲಿಂಗನದೊಡ್ಡಿ ಬಳಿ ರವಿವಾರ ಸಂಜೆ ನಡೆದಿರುವುದು ವರದಿಯಾಗಿದೆ.
ಬೆಂಗಳೂರಿನ ಕೆ.ಪಿ.ಅಗ್ರಹಾರದ ನಿವಾಸಿಗಳು ಸದರಿ ಬಸ್‍ನಲ್ಲಿ ಮಳವಳ್ಳಿ ತಾಲೂಕಿನ ಶಿಂಷಾ ಬಳಿ ಇರುವ ದೇವಸ್ಥಾನಕ್ಕೆ ತೆರಳಿ, ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣ ಸ್ಥಳಕ್ಕಾಗಮಿಸಿದ ಮದ್ದೂರು ಸಂಚಾರಿ ಪೊಲೀಸರು ಮತ್ತು ಸ್ಥಳೀಯರು ಬಸ್‍ನಲ್ಲಿ ಗಾಯಗೊಂಡವರನ್ನು ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್ ಜಿಲ್ಲಾಸ್ಪತ್ರೆಗೆ ಗಾಯಗೊಂಡವರನ್ನು ದಾಖಲು ಮಾಡಲಾಗಿದೆ.
ಆಸ್ಪತ್ರೆಗೆ ಡಿಸಿ ಭೇಟಿ: ವಿಷಯ ತಿಳಿದ ಜಿಲ್ಲಾಧಿಕಾರಿ ಡಾ.ಕುಮಾರ್ ಮಿಮ್ಸ್ ಜಿಲ್ಲಾಸ್ಪತ್ರೆಗೆ ತೆರಳಿ ಪ್ರಯಾಣಿಕರ ಆರೋಗ್ಯ ವಿಚಾರಿಸಿ, ಸೂಕ್ತ ಹಾಗೂ ಉತ್ತಮ ಮಟ್ಟದ ಔಷಧೋಪಚಾರಗಳನ್ನು ತುರ್ತಾಗಿ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.