ಪ್ರತಿಷ್ಠಿತ ಕ್ಷೇತ್ರ ಮಂಡ್ಯದಲ್ಲಿ ದಾಖಲೆಯ ಶಾಂತಿಯುತ ಮತದಾನ

Update: 2024-04-26 17:43 GMT

ಮಂಡ್ಯ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದ ಪ್ರತಿಷ್ಠಿತ ಕ್ಷೇತ್ರವಾಗಿ ರಾಜ್ಯದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಶುಕ್ರವಾರ ದಾಖಲೆಯ ಶಾಂತಿಯುತ ಮತದಾನ ನಡೆಯಿತು.

ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‍ನ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಕಣದಲ್ಲಿದ್ದಾರೆ. ಇದೀಗ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದ್ದು ಫಲಿತಾಂಶಕ್ಕೆ ಜೂ.4ರವರೆಗೆ ಕಾಯಬೇಕಾಗಿದೆ.

ಮಧ್ಯಾಹ್ನ 1 ಗಂಟೆವೇಳೆಗೆ ಶೇ.40.75ರಷ್ಟು ಮತದಾರರು ಮತ ಚಲಾಯಿಸಿದರು. ಮಧ್ಯಾಹ್ನ 3 ಗಂಟೆಗೆ ಮತದಾನದ ಪ್ರಮಾಣ ಶೇ.57.43ಕ್ಕೆ ತಲುಪಿದರೆ, ಮುಕ್ತಾಯದ ವೇಳೆಗೆ ಶೇ.81.46ರಷ್ಟು ಮತದಾನ ದಾಖಲಾಯಿತು.

ಮದ್ದೂರು ತಾಲೂಕು ಕೀಳಘಟ್ಟ ಗ್ರಾಮದ ಎರಡನೇ ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದ ಕೆಲವು ಸಮಯ ಮತದಾನ ವಿಳಂಬವಾಯಿತು. ಇದೇ ತಾಲೂಕಿನ ಪಣ್ಣೆದೊಡ್ಡಿ ಮತಗಟ್ಟೆ ಬಳಿ ಪೊಲೀಸರು ಮತ್ತು ಮತದಾರರ ನಡುವೆ ಸ್ವಲ್ಪ ಮಾತಿನ ಚಕಮಕಿ ನಡೆಯಿತು ಎಂದು ವರದಿಯಾಗಿದೆ.

ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗೆ ಉತ್ಸಾಹದಿಂದ ತೆರಳಿ ಮತವನ್ನು ಚಲಾಯಿಸುತ್ತಿರುವುದು ಕಂಡುಬಂದಿತು. ಭಾರಿ ಬಿಸಿಲು ಹಿನ್ನೆಲೆಯಲ್ಲಿ ಮಧ್ಯಾಹ್ನ ಮತದಾನದ ಬಿರುಸು ಕಡಿಮೆ ಆಯಿತು. ನಾಲ್ಕು ಗಂಟೆಯ ನಂತರ ಮತದಾನ ಬಿರುಸುಪಡೆದುಕೊಂಡಿತು.

ವೃದ್ಧರು ಸೇರಿದಂತೆ ಹೊಸದಾಗಿ ಮತದಾನದ ಹಕ್ಕುಪಡೆದ ಯುವಕರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ವೃದ್ಧರು ಹಾಗೂ ವಿಕಲಚೇತನರಿಗೆ ವ್ಹೀಲ್‍ಚೇರ್ ವ್ಯವಸ್ಥೆ ಕಲ್ಪಿಸಿದ್ದರಿಂದ ಅವರು ನಿರಾಯಸವಾಗಿ ತಮ್ಮ ಹಕ್ಕು ಚಲಾಯಿಸಿದರು.

ಬೆಂಗಳೂರಿನಲ್ಲಿರುವ ಜಿಲ್ಲೆಯ ಮತದಾರರು ತಮ್ಮ ತಮ್ಮ ಗ್ರಾಮಗಳ ಮತಗಟ್ಟೆಗಳಿಗೆ ಆಗಮಿಸಿ ಮತಹಾಕಿದರೆ, ವಿದೇಶದಿಂದಲೂ ಕೆಲವರು ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು. ಲಂಡನ್‍ನಲ್ಲಿರುವ ಮಂಡ್ಯ ತಾಲೂಕು ಕಾಳೇನಹಳ್ಳಿಯ ಸೋನಿಕಾ ಮತ್ತು ಅಮೆರಿಕಾದ ಕ್ಯಾಲಿಪೋರ್ನಿಯಾದಲ್ಲಿರುವ ಮಂಡ್ಯದ ಪ್ರಕೃತಿ ಎಂಬುವರು ಬಂದು ಮತ ಹಾಕಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮಿ, ಪುತ್ರ ಸಚಿನ್ ಜತೆ ನಾಗಮಂಗಲದ ತಮ್ಮ ಸ್ವಗ್ರಾಮ ಇಜ್ಜಲಘಟ್ಟದ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರೆ, ಸಂಸದೆ ಸುಮಲತಾ ಅಂಬರೀಷ್ ಮದ್ದೂರು ತಾಲೂಕು ದೊಡ್ಡರಸಿನಕೆರೆ ಗ್ರಾಮದಲ್ಲಿ ಮತ ಹಾಕಿದರು.

ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಚಿನಕುರಳಿ ಗ್ರಾಮದ ಮತಗಟ್ಟೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ದಂಪತಿ, ಮಳವಳ್ಳಿಯ ಪೂರಿಗಾಲಿಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮದ್ದೂರಿನ ಕದಲೂರಿನಲ್ಲಿ ಶಾಸಕ ಕೆ.ಎಂ.ಉದಯ ದಂಪತಿ ತಮ್ಮ ಹಕ್ಕು ಚಲಾಯಿಸಿದರು.

ಒಟ್ಟು 2,076 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಪೈಕಿ 1,120 ಮತಗಟ್ಟೆಗಳಿಗೆ ವೆಬ್‍ಕಾಸ್ಟಿಂಗ್ ಅಳವಡಿಸಲಾಗಿತ್ತು. ಸೂಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಖುದ್ದಾಗಿ ಹಲವು ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News